ಹಲೋ ಡಾಕ್ಟರ್​: ಹೃದಯಾಘಾತದ ದೃಢೀಕರಣ

ಆರೋಗ್ಯ

ಹೃದಯಾಘಾತದ ಲಕ್ಷಣಗಳಾದ ಎದೆನೋವು, ಬೆವರು, ಏರುಸಿರು ಮುಂತಾದವುಗಳಿಂದ ಆಸ್ಪತ್ರೆಗೆ ದಾಖಲಾದಾಗ ಹೃದಯಾಘಾತ ಆಗಿದೆ ಎಂದು ಖಚಿತಪಡಿಸಿಕೊಳ್ಳಲು ಹಲವಾರು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಹೃದಯಾಘಾತವನ್ನು ದೃಢೀಕರಿಸಿದ ನಂತರವೇ (Diagnosis of Heart attack) ಮುಂದಿನ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಈ ಕೆಳಗಿನ ಪರೀಕ್ಷೆಗಳನ್ನು ಮಾಡಲಾಗುತ್ತದೆ.ಇಸಿಜಿ (ECG): ಇಸಿಜಿಯು ಹೃದಯಾಘಾತವನ್ನು ಪತ್ತೆಹಚ್ಚುವ ಮೊಟ್ಟಮೊದಲ ಪರೀಕ್ಷೆಯಾಗಿದೆ. ಇತ್ತೀಚೆಗೆ ಈ ಸೌಲಭ್ಯವು ಸಾಕಷ್ಟು ಚಿಕ್ಕ ಆಸ್ಪತ್ರೆ, ದವಾಖಾನೆ, ಕ್ಲಿನಿಕ್​ಗಳಲ್ಲಿ ಕೂಡ ಲಭ್ಯವಿದೆ. ಇದು ಹೃದಯದಲ್ಲಿ ಉತ್ಪನ್ನವಾದ ವಿದ್ಯುತ್ ಅಲೆಗಳನ್ನು (electrical signals) ದಾಖಲಿಸುತ್ತದೆ. ಈ ಅಲೆಗಳನ್ನು ಪೇಪರ್ ಮೇಲೆ ಮುದ್ರಿಸಿ ಪರೀಕ್ಷಿಸಲಾಗುತ್ತದೆ. ಹೃದಯಾಘಾತದಿಂದ ಹಾನಿಗೊಂಡ ಹೃದಯದ ಮಾಂಸಖಂಡವು ಯಾವು ವಿದ್ಯುತ್ ಅಲೆಗಳನ್ನು ಪ್ರಸಾರ ಮಾಡುವುದಿಲ್ಲ (conduct) ) ಎಂಬುದು ಇಸಿಜಿಯಲ್ಲಿ ನಮೂದಿಸುತ್ತದೆ. ಹೃದಯಾಘಾತವಾಗಿ ಹಲವಾರು ನಿಮಿಷ, ತಾಸುಗಳಲ್ಲಿ ಈ ಲಕ್ಷಣಗಳು ಕಂಡುಬರುವವು. ತೀರ ಕ್ಷಚಿತವಾಗಿ ಇಸಿಜಿ ಲಕ್ಷಣಗಳು 24ರಿಂದ 48 ಗಂಟೆಗಳನ್ನು ತೆಗೆದುಕೊಳ್ಳಬಹುದು. ಅದಕ್ಕೆಂದೇ ಎದೆನೋವು ಬಂದವರನ್ನು ನಿಗಾ ದಲ್ಲಿಡಲು ಆಸ್ಪತ್ರೆಗೆ ದಾಖಲಿಸಲಾಗುತ್ತದೆ.

ಏಕೊ (ECHO) : ಏಕೊ ಪರೀಕ್ಷೆಯಲ್ಲಿ ಹೃದಯಾಘಾತವಾದ ಹೃದಯದ ಸ್ಥಳದಿಂದ ಧ್ವನಿ ಅಲೆಗಳು (Sound, waves, Ultra sound) ಉತ್ಪನ್ನವಾಗುತ್ತವೆ. ಇವನ್ನು ಎಕೊ ಯಂತ್ರವು ದಾಖಲಿಸುತ್ತದೆ. ಹೃದಯದ ವಿವಿಧ ಕೋಣೆಗಳು ಮತ್ತು ವಾಲ್ವ್​ಗಳನ್ನು ಕೂಡ ಏಕೊದಲ್ಲಿ ಪರೀಕ್ಷಿಸಲಾಗುತ್ತದೆ. ಪರಿಣತ ತಜ್ಞ ವೈದ್ಯರು ಹೃದಯಾಘಾತವಾದ ನಂತರದಲ್ಲಿ ಕೂಡಲೇ, ದೃಢೀಕರಿಸಲು ಏಕೋವನ್ನು ಯಾವಾಗಲೂ ಉಪಯೋಗಿಸುವುದುಂಟು.

ಕೊನೊನರಿ ಅಂಜಿಯಾಗ್ರಾಫಿ: ಹವಾನಿಯಂತ್ರಿತ ವಿಶೇಷ ಕ್ಯಾಥಲ್ಯಾಬ್ ಎಂಬ ವಿಭಾಗದಲ್ಲಿ ಈ ವಿಶೇಷ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲಿ 3 ಕೊರೊನರಿ ರಕ್ತನಾಳಗಳಲ್ಲಿ ಯಾವ ರಕ್ತನಾಳವು ರಕ್ತ ಹೆಪ್ಪುಗಟ್ಟಿ (CLOT) ಮುಚ್ಚಿ ಹೃದಯಾಘಾತವಾಗಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತದೆ. ಅದರ ತೀವ್ರತೆಯನ್ನು ಗಮನಿಸಿ ಮುಂದಿನ ಹೆಚ್ಚಿನ ಚಿಕಿತ್ಸೆಗೆ ತಯಾರಿ ಮಾಡಿಕೊಳ್ಳಲಾಗುತ್ತದೆ.

 

 

 

ಅಂಜಿಯೋಗ್ರಾಫಿ ಪರೀಕ್ಷೆಯಲ್ಲಿ ಶುದ್ಧ ರಕ್ತನಾಳದ (Artery) ಮೂಲಕ ಕೈಯಲ್ಲಿ ಅಥವಾ ತೊಡೆಯಲ್ಲಿ (ಪರಿಣತ ಹೃದಯತಜ್ಞನು ಕೈಯಲ್ಲಿಯೇ ಪರೀಕ್ಷಿಸುತ್ತಾರೆ.) ವೈಯರ್ (Catheter) ಸೇರಿಸಿ ಅದರಲ್ಲಿ ವಿಶೇಷ ಪರೀಕ್ಷಿಸುವ ದ್ರವ್ಯವನ್ನು (DRY) ಹಾಕಿ ಕೊರೊನರಿ ರಕ್ತನಾಳವನ್ನು ಪರೀಕ್ಷಿಸಲಾಗುತ್ತದೆ. ಹಲವು ಬಾರಿ ತೊಡೆಯಲ್ಲಿಯೇ (ಉದಾ: ಬೊಜ್ಜು ಇದ್ದವರಲ್ಲಿ) ಮಾಡಬೇಕಾಗಬಹುದು. ಈ ಪರೀಕ್ಷೆಗೆ ಎಚ್ಚರ ತಪ್ಪಿಸುವುದಿಲ್ಲ. ಹೃದಯಾಘಾತವಾದವರೂ Monitor ನೋಡಬಹುದು.

ರಕ್ತ ಪರೀಕ್ಷೆಗಳು: ಹೃದಯಾಘಾತವಾದಾಗ ಹೃದಯ ಸ್ನಾಯುವಿನಿಂದ ಬಿಡುಗಡೆಯಾದ ಹಲವಾರು ಪ್ರೋಟೀನ್ ರಕ್ತದಲ್ಲಿ ಸೇರುವುದರಿಂದ ವಿಶೇಷ ರಕ್ತಪರೀಕ್ಷೆಯಿಂದ ಇವನ್ನು ಧೃಢೀಕರಿಸಲಾಗುತ್ತದೆ.

ಹೃದಯದ ಸ್ಕ್ಯಾನ್ (MRI or CT): ಹೃದಯಾಘಾತವಾಗಿ ವಿಶೇಷ ಪರಿಸ್ಥಿತಿಗಳಲ್ಲಿ (SPECIAL DIFFICULT CASES) ಈ ಸ್ಕ್ಯಾನ್ ಮಾಡಲಾಗುತ್ತದೆ. ಇದು ಸಾಮಾನ್ಯ MRI ಅಥವಾ CT ಸ್ಕ್ಯಾನ್​ನಂತೆಯೇ ಇರುತ್ತದೆ.

ನೆನಪಿಡಿ. ನಿಮ್ಮ ಎದೆನೋವು ‘ಗ್ಯಾಸ್’ ಅನಿಸಿದರೂ ಹೃದಯಾಘಾತ ಆಗಿದೆಯೇ ಎಂಬುದನ್ನು ಯಾವಾಗಲೂ ಪರೀಕ್ಷಿಸಿಕೊಳ್ಳಿ. ಇದನ್ನು ಅಲಕ್ಷಿಸುವುದೇ ಮಾರಣಾಂತಿಕ ಹೆಜ್ಜೆಗೆ ಹಾದಿಯಾಗುತ್ತದೆ.

Leave a Reply

Your email address will not be published. Required fields are marked *