ಇ-ಸ್ವತ್ತಿಗೆ ಹಣ ಕೇಳಿದರೆ ಕ್ರಿಮಿನಲ್ ಮೊಕದ್ದಮೆ : ಸಿಇಓ ದಿವಾಕರ್

ಜಿಲ್ಲಾ ಸುದ್ದಿ

ಇ-ಸ್ವತ್ತಿಗೆ ಹಣ ಕೇಳಿದರೆ ಕ್ರಿಮಿನಲ್ ಮೊಕದ್ದಮೆ : ಸಿಇಒ ದಿವಾಕರ್
ಲೋಪ ಕಂಡು ಬಂದಲ್ಲಿ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿ
ಮೊಳಕಾಲ್ಮುರು : ಗ್ರಾಮೀಣ ಪ್ರದೇಶದ ಜನರಿಗೆ ಇ-ಸ್ವತ್ತು ಸೇರಿದಂತೆ ಇನ್ನಿತರ ಸರಕಾರಿ ಕೆಲಸಗಳನ್ನು ಮಾಡಿಕೊಡಲು ಹಣದ ಆಮಿಷ ನೀಡಿದ್ದು ಕಂಡು ಬಂದಲ್ಲಿ ಸಂಬಂಧಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಪಂ ಸಿಇಒ ಎಂ.ಎಸ್.ದಿವಾಕರ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಸೇವೆಯನ್ನು ಪ್ರಾಮಾಣಿಕವಾಗಿ ಹಾಗೂ ನಿಷ್ಟೆಯಿಂದ ನಿರ್ವಹಿಸಬೇಕು. ನಿಸ್ವಾರ್ಥ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಲೋಪ ಕಂಡು ಬಂದಲ್ಲಿ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿಯಾಗಲಿದೆ ಎನ್ನುವುದನ್ನು ಪ್ರತಿಯೊಬ್ಬರೂ ನೆನಪಲ್ಲಿಟ್ಟುಕೊಳ್ಳಬೇಕು ಎಂದರು.

 

 

 

ಇ-ಸ್ವತ್ತು ಪಡೆಯುವುದು ಸಾರ್ವಜನಿಕರ ಹಕ್ಕಾಗಿದೆ. ಜನರ ದಾಖಲೆ ಜನರಿಗೆ ನೀಡಲು ಹಣದ ಆಮಿಷ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಇಂಥಹ ಪ್ರಕರಣಗಳು ಕಂಡು ಬಾರದಂತೆ ಎಚ್ಚರದಿಂದ ಕರ್ತವ್ಯ ನಿರ್ವಹಿಸುವುದು ಉತ್ತಮ. ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಬೀದಿ ದೀಪ ನಿರ್ವಹಣೆ, ಕುಡಿವ ನೀರು ಸರಬರಾಜು, ಘನತ್ಯಾಜ್ಯ ವಿಲೇವಾರಿ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಿದಲ್ಲಿ ಉತ್ತಮ ಹೆಸರು ಪಡೆಯಲಿದ್ದೀರಾ ಎಂದರು.
ಇತ್ತಿಚಿಗೆ ದನಕರುಗಳಿಗೆ ಚರ್ಮಗಂಟು ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ರಾಸುಗಳಿಗೆ ಚಿಕಿತ್ಸೆ ನೀಡುವ ಅಭಿಯಾನ ಆರಂಭಿಸಲಾಗಿದೆ. ರೈತರಿಗೆ ನೆರವಾಗಲು 8277100200 ಸಹಾಯವಾಣಿ ತೆರೆಯಲಾಗಿದ್ದು, ಈ ಸಂಬಂಧ ಹೆಚ್ಚು ಪ್ರಚಾರ ನಡೆಸಬೇಕು. ಈ ಸಹಾಯವಾಣಿಗೆ ಕರೆ ಬಂದ ಕೂಡಲೇ ಸಮೀಪದ ಪಶು ವೈದ್ಯರನ್ನು ಸಂಪರ್ಕ ಮಾಡಿ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಈ ಸೇವೆಯು ರೈತರಿಗೆ ಹೆಚ್ಚು ಅನುಕೂಲಕರವಾಗಿದ್ದು, ಗ್ರಾಪಂ ಪಿಡಿಒಗಳು ಗ್ರಾಮಗಳಲ್ಲಿ ಟಾಂ-ಟಾಂ ಹಾಕಿಸಿ ಪ್ರತಿಯೊಬ್ಬರೂ ತಿಳಿಸ ಬೇಕು ಎಂದು ಸೂಚಿಸಿದರು.
ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯುನ್ನತ ಪರಿಕರ ಹಾಗೂ ನುರಿತ ವೈದ್ಯರಿದ್ದಾರೆ. ಇದರ ಜತೆ ಅಗತ್ಯ ಔಷಧಿ ಲಭ್ಯವಿರುತ್ತದೆ. ಅನೇಕರು ಮಾಹಿತಿ ಕೊರತೆಯಿಂದ ಹೆಚ್ಚು ಹಣತೆತ್ತು ಖಾಸಗಿ ಆಸ್ಪತ್ರೆಗಳಗತ್ತ ಮುಖ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಸರಕಾರಿ ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗತಿ ಮೂಡಿಸಬೇಕು ಎಂದರು.
ಸಭೆಯಲ್ಲಿ ತಾಪಂ ಇಒ ಕೆ.ಒ.ಜಾನಕಿರಾಂ, ಜಿಪಂ ಉಪ ಕಾರ್ಯದರ್ಶಿ ರಂಗಸ್ವಾಮಿ, ತಾಪಂ ವ್ಯವಸ್ಥಾಪಕ ನಂದೀಶ್, ಪಶೂ ಸಂಗೋಪನಾ ಇಲಾಖೆ ಇಎಎ ಡಾ.ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಮಾಲತಿ, ಎಸ್‌ಟಿ ಇಲಾಖಾಧಿಕಾರಿ ಡಿ.ಚಿದಾನಂದಪ್ಪ ಸೇರಿದಂತೆ ಎಲ್ಲಾ ಇಲಾಖೆಗಳ ಅನುಷ್ಟಾನಾಧಿಕಾರಿಗಳು, ಗ್ರಾಪಂ ಪಿಡಿಒಗಳು, ತಾಂತ್ರಿಕ ಸಹಾಯಕರು, ಎಂಐಎಸ್, ಐಇಸಿ ಕೋಆರ್ಡಿನೇಟರ್‌ಗಳು ಇದ್ದರು.

Leave a Reply

Your email address will not be published. Required fields are marked *