ಕೆರೆಯಲ್ಲಿ‌ ನೆಲೆಗೊಂಡ ಜಟೆಯುಕ್ತ ಗಂಗೆ ಹೊತ್ತ ಶಿವ

ಜಿಲ್ಲಾ ಸುದ್ದಿ

ಹೊಳಲ್ಕೆರೆ ಪಟ್ಟಣದ ಹೃದಯಭಾಗದಲ್ಲಿರುವ ಶಿವನಕೆರೆಯಲ್ಲಿ 19 ಅಡಿ ಎತ್ತರದ ಏಕಶಿಲೆಯಲ್ಲಿ ಕೆತ್ತಲಾಗಿರುವ ಶಿವನ ವಿಗ್ರಹವನ್ನು ಶುಕ್ರವಾರ ಶಾಸ್ತ್ರೋಕ್ತವಾಗಿ ಇರಿಸಲಾಯಿತು.
ಜಟೆಯಲಿ ಗಂಗೆಯನ್ನಿರಿಸಿಕೊಂಡಿರುವ ಪರಶಿವನನ್ನು ಲೋಕ ಕಲ್ಯಾಣಕ್ಕಾಗಿ ಕೆರೆಯ ಮಧ್ಯಭಾಗದಲ್ಲಿಟ್ಟು ಅಭಿಷೇಕ ಮಾಡಲಾಯಿತು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಪೂಜೆ ಸಲ್ಲಿಸಿ ಮಾತನಾಡುತ್ತ ಪ್ರತಿಯೊಬ್ಬರು ಶ್ರದ್ದಾಭಕ್ತಿಯಿಂದ ಪೂಜಿಸುವ ಶಿವನನ್ನು ಶಿವನಕೆರೆಯ ಮಧ್ಯದಲ್ಲಿ ಕೂರಿಸುವುದಕ್ಕಾಗಿ ಚೆನ್ನೈನಿಂದ ಕ್ರೈನ್ ತರಿಸಲಾಗಿದೆ. ಹೊಳಲ್ಕೆರೆಯಿಂದ ಹೊಸದುರ್ಗಕ್ಕೆ ಹೋಗುವ ರಸ್ತೆಯಲ್ಲಿರುವ ಈ ಕೆರೆಯಲ್ಲಿ ನಿಲ್ಲಿಸಲಾಗುವ ಶಿವನನ್ನು ಎಲ್ಲರೂ ನಿಂತು ನೋಡಲೇಬೇಕು ಅಂತಹ ನಯನ ಮೋನಹರವಾಗಿದೆ. ಈ ವಿಗ್ರಹವನ್ನು ಕೆತ್ತಿರುವ ಶಿಲ್ಪಿ ಕೂದಲಲ್ಲಿ ಗಂಗೆಯನ್ನು ಕೂರಿಸಿರುವುದು ಅತ್ಯಾಕರ್ಷಣೀಯವಾಗಿದೆ. ಮುಂದಿನ ದಿನಗಳಲ್ಲಿ ಯಾರಾದರೂ ದೊಡ್ಡ ಸ್ವಾಮಿಗಳನ್ನು ಕರೆಸಿ ಶಿವನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಜೊತೆಗೆ ಹನ್ನೆರಡನೆ ಶತಮಾನದ ಬಸವಣ್ಣ ಹಾಗೂ ಲಿಂಗವನ್ನು ಕೂಡ ಇಲ್ಲಿ ಪ್ರತಿಷ್ಟಾಪಿಸಿ ಧರ್ಮಾತೀತ, ಜಾತ್ಯಾತೀತವಾಗಿ ಎಲ್ಲರನ್ನು ಆಹ್ವಾನಿಸಲಾಗುವುದು. ಹೊಳಲ್ಕೆರೆಯಲ್ಲಿರುವ ಒಂಟಿ ಕಲ್ಲಿನ ಗಣಪನನ್ನು ಬಿಟ್ಟರೆ ಕೆರೆಯ ಮಧ್ಯಭಾಗದಲ್ಲಿರುವ ಶಿವನ ವಿಗ್ರಹ ಪ್ರವಾಸಿ ತಾಣವಾಗಲಿದೆ ಎಂದು ಹೇಳಿದರು.
ರಾಜಕಾರಣದಲ್ಲಿ ಅಧಿಕಾರ ಶಾಶ್ವತವಲ್ಲ. ಇಂತಹ ಪುಣ್ಯದ ಕೆಲಸಗಳನ್ನು ಮಾಡಿದಾಗ ಮಾತ್ರ ಭೂಮಿ ಸೂರ್ಯ ಚಂದ್ರ ಇರುವತನಕ ಶಾಶ್ವತವಾಗಿ ಉಳಿಯಲಿದೆ. ಜೀವನದಲ್ಲಿ ಯಾರು ಎಲ್ಲಿಯೂ ನೋಡಿರದಂತೆ ಶಿವನ ವಿಗ್ರಹ ಇದಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ನುಡಿದರು.
ಮಾಜಿ ಶಾಸಕ ಎ.ವಿ.ಉಮಾಪತಿ, ಪುರಸಭೆ ಅಧ್ಯಕ್ಷ ಆರ್.ಎ.ಅಶೋಕ್, ಉಪಾಧ್ಯಕ್ಷ ಕೆ.ಸಿ.ರಮೇಶ್, ಸದಸ್ಯರುಗಳಾದ ಮುರುಗೇಶ್, ಮಲ್ಲಿಕಾರ್ಜುನ್, ಶ್ರೀಮತಿ ನಾಗರತ್ನಮ್ಮ ವೇದಮೂರ್ತಿ, ಬಸವರಾಜ್ ಯಾದವ್, ಪುರಸಭೆ ಅಧಿಕಾರಿಗಳು ಹಾಗೂ ಹೊಳಲ್ಕೆರೆ ಪಟ್ಟಣ ನಿವಾಸಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.
ನೆರೆದಿದ್ದ ಜನತೆಗೆ ಪ್ರಸಾದ ವಿನಿಯೋಗಿಸಲಾಯಿತು

 

 

 

Leave a Reply

Your email address will not be published. Required fields are marked *