ಕಟ್ಟಡ ಕಾರ್ಮಿಕರಿಗೆ ಬಸ್‍ಪಾಸ್ ವಿತರಣೆ ಮಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಜಿಲ್ಲಾ ಸುದ್ದಿ

ಕಾರ್ಮಿಕ ಇಲಾಖೆಯ ರಾಜ್ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿರುವ ಕಟ್ಟಡ ಕಾರ್ಮಿಕರಿಗೆ ಉಚಿತ ಪ್ರಯಾಣದ ಬಸ್‍ಪಾಸ್‍ಗಳನ್ನು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ವಿತರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕಾರ್ಮಿಕ ಇಲಾಖೆ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಸಹಯೋಗದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಬಸ್‍ಪಾಸ್ ವಿತರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ತಮ್ಮ ವಾಸಸ್ಥಳದಿಂದ 45 ಕಿ.ಮೀ ವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು, ಕಟ್ಟಡ ಕಾರ್ಮಿಕರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದರು.
ಉಚಿತ ಪಾಸುದಾರರು ಪ್ರಾರಂಭಿಕ ಸ್ಥಳದಿಂದ 07 ಹಂತಗಳವರೆಗೆ ಗರಿಷ್ಟ 45 ಕಿ.ಮೀ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಬಸ್ಸುಗಳಲ್ಲಿ ಪಾಸುಗಳನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ ಎಂದರು.
ಕಟ್ಟಡ ಕಾರ್ಮಿಕರು ನಗರದ ಪ್ರದೇಶಗಳಲ್ಲಿ ಬಾಡಿಗೆ ಮನೆಯಲ್ಲಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಜೊತೆಗೆ ತಮ್ಮ ಸ್ವಂತ ಗ್ರಾಮಗಳಿಂದ ಬೇರೆಡೆಗೆ ಕೆಲಸಕ್ಕಾಗಿ ಬಂದು ಹೋಗಲು ಬಸ್‍ಗಳಲ್ಲಿ ಹಣ ನೀಡುವುದು ದುಬಾರಿಯಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‍ಪಾಸ್ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಬಸ್‍ಪಾಸ್ ಪಡೆಯಲು ಕಾರ್ಮಿಕ ಇಲಾಖೆಯ ನೊಂದಾಯಿತ ಗುರುತಿನ ಚೀಟಿ ಮಾಹಿತಿಯೊಂದಿಗೆ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರವನ್ನು ಸಂಪರ್ಕಿಸಿ ಪಾಸ್ ಪಡೆಯಬಹುದಾಗಿದೆ. ಕಾರ್ಮಿಕ ಮಂಡಳಿಯ ಈ ಬಸ್‍ಪಾಸ್ ಪಡೆಯಲು ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 155214 ನ್ನು ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ಎನ್.ಯಶೋಧರ, ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ, ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗೀಯ ಅಧಿಕಾರಿ ಜಿ.ಬಿ.ಮಂಜುನಾಥ್, ಘಟಕ ವ್ಯವಸ್ಥಾಪಕ ಹೊನ್ನಪ್ಪ, ಸೂಪರ್‍ವೈಸರ್ ಮಂಜುಳಾ, ಮುಖಂಡರಾದ ಜಯಪಾಲಯ್ಯ ಸೇರಿದಂತೆ ಮತ್ತಿತರರು ಇದ್ದರು.

 

 

 

Leave a Reply

Your email address will not be published. Required fields are marked *