ಸತೀಶ್ ಗೆದ್ದರೆ ಏನು ಕೊಡ್ತಾರಂತೆ ಅದೇನು ನೋಡಿ…

ಜಿಲ್ಲಾ ಸುದ್ದಿ

 

ಶಿರಾ ಕ್ಷೇತ್ರದಲ್ಲಿ ಸತೀಶ್ ಗೆಲುವು ಸಾಧಿಸಿದ್ರೆ, ಭೂತಪ್ಪನಿಗೆ ಕುರಿ ಹರಕೆ ಬೇಡಿಕೆಯಿಟ್ಟಿರುವ ಹರಕೆ ಪತ್ರ ವೈರಲ್

ಚಿತ್ರದುರ್ಗ : ಸಾಮಾನ್ಯವಾಗಿ ನಾವು ದೇವರಲ್ಲಿ ವಿದ್ಯೆ, ಉದ್ಯೋಗ, ಸಂತಾನ ಭಾಗ್ಯ, ಮದುವೆ, ಸೇರಿದಂತೆ ಕಷ್ಟಗಳನ್ನು ಬಗೆಹರಿಸು ಎಂದು ದೇವರಲ್ಲಿ ಬೇಡಿಕೊಳ್ಳುವುದು ವಾಡಿಕೆ ಇದೆ. ಆದರೆ ಇಲ್ಲೊಬ್ಬರು 2023 ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ನಾಯಕ ಗೆದ್ದರೆ ಒಂದು ಕುರಿ ಊಟ ಕೊಡುತ್ತೇನೆ ಎಂದು ಭೂತೇಶ್ವರ ಹಾಗೂ ಚೌಡೇಶ್ವರಿ ದೇವಿಗೆ ಹರಕೆ ಹೊತ್ತ ಪತ್ರವನ್ನು ಮಡಿಚಿ ದೇವರ ಮರಕ್ಕೆ ಕಟ್ಟುತ್ತಿರುವ ಪತ್ರ ಹಾಗೂ ವೀಡಿಯೋ ಚಿತ್ರದುರ್ಗ ಜಿಲ್ಲೆಯಲ್ಲಿ ಸದ್ಯ ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದೆ.

ಹರಕೆ ಪತ್ರದಲ್ಲೇನಿದೆ : ಸಾಸಲು ಸತೀಶ್ ಅಣ್ಣ ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಬಿ.ಫಾರಂ ಸಿಕ್ಕಿದೆ. ಚುನಾವಣೆಯಲ್ಲಿ ಬಹುಮತದಿಂದ ಸ್ವಾಮಿ ಭೂತಪ್ಪ ಹಾಗೂ ಚೌಡೇಶ್ವರಿ ತಾಯಿ ಕೃಪೆಯಿಂದ ನಮ್ಮ ಸತೀಶಣ್ಣ ಚುನಾವಣೆಯ ಸ್ಪರ್ಧೆಯಲ್ಲಿ ಗೆದ್ದರೆ ಒಂದು ಬೇಟೆ ಕೊಟ್ಟು ಊಟ ಕೊಡುತ್ತೇನೆ. ಈ ಬಡ ಭಕ್ತನ ಕೋರಿಕೆಯನ್ನು ನಿಮ್ಮ ಸನ್ನಿಧಿಯಲ್ಲಿ ಈಡೇರಿಸಬೇಕು.
ಇಂತಿ ನಿಮ್ಮ ಭಕ್ತರು ಶಿವು, ಕರಿಯಣ್ಣ, ಗಂಗಣ್ಣ ನವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಾಸಲು ಭೂತಪ್ಪ ಹಾಗೂ ಚೌಡೇಶ್ವರಿ ದೇವಿಗೆ ಬರೆದಿರುವ ಹರಕೆ ಪತ್ರ ಬರೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

 

 

ಸಾಸಲು ಸತೀಶ್ ಯಾರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರಿತಿಸಿಕೊಂಡಿರುವ ತುಮಕೂರು ಜಿಲ್ಲೆಯ ಹಾಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷರು, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಡುಗೊಲ್ಲ ಸಮುದಾಯದ ಮುಖಂಡನೇ ಡಾ. ಸಾಸಲು ಸತೀಶ್. 2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮತ್ತೆ 2018 ರಲ್ಲಿ ಸ್ಪರ್ಧಿಸಲು ಪಕ್ಷ ಸಂಘಟನೆ ಮಾಡಿಕೊಂಡು ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಸತೀಶ್ ಗೆ ಟಿಕೆಟ್ ತಪ್ಪಿಸಿ, ಮಾಜಿ ಸಚಿವ ಜಯಚಂದ್ರ ಅವರ ಮಗ ಸಂತೋಷ್ ಜಯಚಂದ್ರ ಅವರಿಗೆ ಟಿಕೆಟ್ ನೀಡಿ, ರಾಜ್ಯದ ಕಾಡುಗೊಲ್ಲ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ, ಕೂಡ್ಲಿಗಿ, ಜಗಳೂರು, ಶಿರಾ, ಚಿಕ್ಕನಾಯಕನಹಳ್ಳಿ, ಮಧುಗಿರಿ, ಅರಸೀಕೆರೆ, ಗುಬ್ಬಿ, ಈಗೆ ಕಾಂಗ್ರೆಸ್ ಹಲವು ಕಡೆಗಳಲ್ಲಿ ಗೆಲ್ಲಬಹುದಾದ ವಿಧಾನಸಭಾ ಕ್ಷೇತ್ರಗಳು ಹಾಗೂ ಚಿತ್ರದುರ್ಗ, ತುಮಕೂರು ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಂಡು ನಂತರ ಪಶ್ಚಾತ್ತಾಪ ಪಡಬೇಕಾಯಿತು.

ಶಿರಾ ಕ್ಷೇತ್ರದ ಮೇಲೆ ಸಾಸಲು ಕಣ್ಣು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಡಾ. ಸಾಸಲು ಸತೀಶ್ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಶಿರಾ ತಾಲೂಕಿನಲ್ಲಿ ಕಾಡುಗೊಲ್ಲ ಸಮುದಾಯದ ಸುಮಾರು 40 ಸಾವಿರಕ್ಕೂ ಹೆಚ್ಚು ಮತಗಳಿವೆ. ಆಗಾಗಿ ಶಿರಾ ದಿಂದ ಸ್ಪರ್ಧಿಸಲು ಸತೀಶ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಅದರಂತೆ ಅಭಿಮಾನಿಗಳು ಕೂಡ ದೇವರಿಗೆ ಹರಕೆ ಕಟ್ಟಿಕೊಂಡಿದ್ದಾರೆ.

ಶಾಸಕಿ ಕೆ ಪೂರ್ಣಿಮಾರನ್ನು ಕಾಂಗ್ರೆಸ್ ಗೆ ತರಲು ಯತ್ನ : ಹಿರಿಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಪೂರ್ಣಿಮಾ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆ ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರವಾಗಿದೆ. ಯಾಕೆಂದರೆ ಶಾಸಕಿ ಕೆ. ಪೂರ್ಣಿಮಾ ಅವರ ತಂದೆ ದಿವಂಗತ ಎ. ಕೃಷ್ಣಪ್ಪ ಕಾಂಗ್ರೆಸ್ ಗರಡಿಯಲ್ಲಿ ಬೆಳೆದು ಸಚಿವರಾಗಿದ್ದರು. ತಂದೆಯ ಹಾದಿಯಲ್ಲಿ ಸಾಗುತ್ತಿರುವ ಮಗಳನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಸಿದ್ದತೆ ನಡೆಸುತ್ತಿದೆ ಎನ್ನಬಹುದು.

ಕಾಡುಗೊಲ್ಲರಿಗೆ ಇಬ್ಬರಿಗೆ ಟಿಕೆಟ್ : 2023 ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಹಾಗೂ ತುಮಕೂರು ಜಿಲ್ಲೆಯ ಶಿರಾ ಅಥವಾ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕಾಡುಗೊಲ್ಲರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. 2018 ರಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡಬಾರದು ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ರಾಜ್ಯಮಟ್ಟದ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಹಿರಿಯೂರು ಕ್ಷೇತ್ರದಲ್ಲಿ ಕಾಡುಗೊಲ್ಲರಿಗೆ ಟಿಕೆಟ್ ನೀಡಿದರೆ ನಾವು ರಾಜಕೀಯದಲ್ಲಿ ಮತ್ತೋಷ್ಟು ಭವಿಷ್ಯ ಕಾಣಬಹುದು ಎಂಬುದು ಮಾಜಿ ಸಚಿವ ಹೆಚ್. ಆಂಜನೇಯ, ಹೊಸದುರ್ಗ ಮಾಜಿ ಶಾಸಕ ಬಿಜಿ ಗೋವಿಂದಪ್ಪ, ಮಾಜಿ ಸಂಸದ ಬಿಎನ್ ಚಂದ್ರಪ್ಪ, ತುಮಕೂರು ಮಾಜಿ ಸಂಸದ ಮುದ್ದಹನುಮೇಗೌಡ, ಮಧುಗಿರಿ ಕೆಎನ್. ರಾಜಣ್ಣ, ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಸೇರಿದಂತೆ ಮತ್ತಿತರರು ಸ್ಥಳೀಯ ನಾಯಕರ ಅಭಿಪ್ರಾಯವಾಗಿದೆ.

ಒಟ್ಟಾರೆಯಾಗಿ 2023 ರಲ್ಲಿ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲು ಹೊರಟಿರುವ ಕಾಂಗ್ರೆಸ್ ಪಕ್ಷ, 2018 ರಲ್ಲಿ ಕಾಡುಗೊಲ್ಲರಿಗೆ ಟಿಕೆಟ್ ಕೊಡಲಾಗುತ್ತದೆ ಎಂದು ಚುನಾವಣೆ ಸಮೀಪಿಸುತ್ತಿರುವರೆಗೂ ಹೇಳಿಕೊಂಡು ಬಂದು ಕೊನೆಯಲ್ಲಿ, ಒಂದು ಟಿಕೆಟ್ ನೀಡದೇ ಕೈಕೊಟ್ಟು ಹಲವು ಕಡೆಗಳಲ್ಲಿ ಗೆಲ್ಲಬಹುದಾದ ವಿಧಾನಸಭಾ ಕ್ಷೇತ್ರಗಳಲ್ಲಿ ಹೀನಾಯ ಸೋಲು ಅನುಭವಿಸಿದ್ದು ಮುಂಬರುವ 2023 ರಲ್ಲಿ ಕಾಡುಗೊಲ್ಲರಿಗೆ ಟಿಕೆಟ್ ಕೊಡ್ತಾರಾ ಅಥವಾ ಕಾಂಗ್ರೆಸ್ ಕೈ ಕೊಡುತ್ತಾ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *