ಲೋಕ ಅದಾಲತ್:   ಜಿಲ್ಲೆಯಲ್ಲಿ 66,489 ಪ್ರಕರಣಗಳು ಇತ್ಯರ್ಥ

ಜಿಲ್ಲಾ ಸುದ್ದಿ

ಲೋಕ ಅದಾಲತ್:   ಜಿಲ್ಲೆಯಲ್ಲಿ 66,489 ಪ್ರಕರಣಗಳು ಇತ್ಯರ್ಥ

 

 

 

ಚಿತ್ರದುರ್ಗ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಕಳೆದ ಫೆ.11 ರಂದು ಜಿಲ್ಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಮನಗೂಳಿ ಪ್ರೇಮಾವತಿ ಎಂ. ಅವರ ನೇತೃತ್ವದಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳೂ ಸೇರಿದಂತೆ ಒಟ್ಟು 66,489 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿದ್ದು, 27.53 ಕೋಟಿ ರೂ. ಪರಿಹಾರ ಒದಗಿಸಲಾಗಿದೆ.

ಫೆ. 11 ರಂದು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದ್ದು, ಇದರಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಮೋಟಾರು ವಾಹನ ಅಪಘಾತ ಪರಿಹಾರ, ಕಂದಾಯ ಪ್ರಕರಣ, ಚೆಕ್ ಬೌನ್ಸ್, ಬ್ಯಾಂಕ್ ವಸೂಲಾತಿ, ವಿದ್ಯುತ್ ಹಾಗೂ ನೀರಿನ ಶುಲ್ಕ ಪ್ರಕರಣಗಳು, ಕೌಟುಂಬಿಕ ಕಲಹ, ಬಾಡಿಗೆ ಅನುಭೋಗದ ಹಕ್ಕು ಎಂಎಂಆರ್‍ಡಿ ಹಾಗೂ ಭೂ ಪರಿಹಾರ ಕೇಸುಗಳು ಸೇರಿದಂತೆ ಹಲವು ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲು ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಅವಕಾಶ ಕಲ್ಪಿಸಲಾಗಿತ್ತು.  ನ್ಯಾಯಾಲಯಗಳಲ್ಲಿ ಬಾಕಿ ಇರುವ 38,486 ಪ್ರಕರಣಗಳಲ್ಲಿ ಫೆ. 11 ರಂದು ನಡೆಸಿದ ಲೋಕ ಅದಾಲತ್‍ನಲ್ಲಿ 2008 ಪ್ರಕರಣಗಳನ್ನು ತೆಗೆದುಕೊಳ್ಳಲಾಗಿದ್ದು, ಇದರಲ್ಲಿ 1228 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ, 14,22,80,177 ರೂ. ಗಳ ಪರಿಹಾರ ಒದಗಿಸಲಾಗಿದೆ.  ಅದಾಲತ್‍ನಲ್ಲಿ ಒಟ್ಟು 66214 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ತೆಗೆದುಕೊಂಡಿದ್ದು, ಈ ಪೈಕಿ 65261 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ, 13,31,06,904 ರೂ. ಗಳ ಪರಿಹಾರ ಒದಗಿಸಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಮನಗೂಳಿ ಪ್ರೇಮಾವತಿ ಎಂ., 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎನ್. ಕಲ್ಕಣಿ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಕೆ. ಕೋಮಲ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆಂಪರಾಜು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ಗಿರೀಶ್ ಹಾಗೂ ಇತರೆ ನ್ಯಾಯಾಲಯಗಳ ನ್ಯಾಯಾಧೀಶರುಗಳು ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *