ಎರಡು ಬಣಗಳಾಗಿ ಹೋದ ಜಿಲ್ಲಾ ಬಿಜೆಪಿ: ಶೀಘ್ರದಲ್ಲಿ ನಾಯಕರೆದುರು ಸ್ಪೋಟಗೊಳ್ಳಲಿರುವ ಆಕ್ರೋಶ

ರಾಜ್ಯ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೋಟೆ ನಾಡು ಚಿತ್ರದುರ್ಗ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಬಾರಿ‌ ಬೇಡಿಕೆ ಇದೆ. ಆದರೆ ಹಿಂದಿನ ಜಿಲ್ಲಾ ಬಿಜೆಪಿ ಅಧ್ಯಕ್ಷರ ಮುಂದುವರಿಕೆಗೆ ಜಿಲ್ಲೆಯಲ್ಲಿ ವಿರೋಧದ ಕೂಗು ಕೇಳಿ‌ ಬಂದಿದೆ. ಕಾರಣ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಸೋತರೂ ಇವರನ್ನು ಮತ್ತೆ ಜಿಲ್ಲಾಧ್ಯಕ್ಷರನ್ನಾಗಿ ಮುಂದುವರೆಸಿದ್ದೇ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಶುರುವಾಗಲು ಕಾರಣವಾಗಿದೆ. ಇದೇ ಸಮಯದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಮಾಳಪ್ಪನಹಟ್ಟಿಯ ತಿರುಮಲ ಕಲ್ಯಾಣ ಮಂಟಪದಲ್ಲಿ ನಡೆಸಿದರೆ, ನಗರದ ಹೊರ ವಲಯದ ಹೊಟೇಲ್ ನಲ್ಲಿ ವಿರೋಧಿ ಬಣ ಜಿಲ್ಲಾಧ್ಯಕ್ಷ ಹಠಾವೋ ಎಂಬ ಸಭೆಯನ್ನು ಮಾಡಿತ್ತು. ಈ ಎಲ್ಲಾ ವಿಚಾರವು ರಾಜ್ಯ ನಾಯಕರ ಅಂಗಳಕ್ಕೆ ಮುಟ್ಟಿದೆ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಅವರಿಗೆ ಭಿನ್ನಮತ ಶಮನ ಮಾಡುವ ಜವಾಬ್ದಾರಿ ನೀಡಿದ್ದು, ಇದುವರೆಗೂ ಸರಿ‌ ಮಾಡಲಾಗದೆ ಇದು ಈಗ ತಾರಕಕ್ಕೇರಿದೆ. ಕಳೆದೆರಡು ದಿನಗಳ ಹಿಂದೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನಗರದ ಒಕ್ಕಲಿಗರ ವಿದ್ಯಾರ್ಥಿ ನಿಲಯದ ಕಟ್ಟಡಲ್ಲಿ‌ ಬಿಜೆಪಿ ಜಿಲ್ಲಾ ಚುನಾವಣಾ ಕಚೇರಿಯನ್ನು ಆರಂಭಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾಲಿ ಹೊಳಲ್ಕೆರೆ ಏಕೈಕ ಶಾಸಕರಾದ ಡಾ.ಎಂ. ಚಂದ್ರಪ್ಪ ಸೇರಿದಂತೆ ವಿರೋಧಿ ಬಣವೆಂದು ಗುರುತಿಸಿಕೊಂಡಿರುವವರು ಯಾರೂ ಈ ಕಾರ್ಯಕ್ರಮಕ್ಕೆ ಹಾಜರಿರಲಿಲ್ಲ. ಈ ವಿರೋಧಿ ಬಣವು ಚುನಾವಣಾ ಕಚೇರಿಯ ವಿರುದ್ದ ಮೋದಿಗಾಗಿ ಬಿಜೆಪಿ ಎಂಬ ಹೆಸರಿನಡಿಯಲ್ಲಿ ಮತ್ತೊಂದು ಕಚೇರಿಯನ್ನು ತೆರೆಯುವ ಎಲ್ಲಾ ಸಿದ್ದತೆಗಳು ನೆಡೆಯುತ್ತಿವೆ. ಇನ್ನೊಂದು ಕಡೆ ಈಗಾಗಲೇ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಸುತ್ತಾಡಿ ಪಕ್ಷ ಸಂಘಟನೆ ಮಾಡಿಕೊಂಡು ಟಿಕೆಟ್ ಕೊಟ್ಟರೆ ನಾನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎಂದು ಬಿಜೆಪಿ ಯುವ ಮುಖಂಡ ಹಾಗೂ ಹೊಳಲ್ಕೆರೆ ಶಾಸಕ ಚಂದ್ರಪ್ಪ ಪುತ್ರ ರಘು ಚಂದನ್ ಟಿಕೆಟ್ ಗಾಗಿ ಬೆಂಗಳೂರು ದೆಹಲಿ ಸುತ್ತುತ್ತಿದ್ದಾರೆ.ನನಗೆ ಟಿಕೆಟ್ ಸಿಗುವ ಭರವಸೆಯಿದೆ ಎಂದಿರುವ ರಘುಚಂದನ್ ಆರ್ ಎಸ್ ಎಸ್ ನ ವರಿಷ್ಠ ಬಿಎಲ್ ಸಂತೋಷ್ ಜಿ ಅವರನ್ನು ಭೇಟಿಯಾಗಿದ್ದು, ಇದೀಗ ನಾಗಪುರದಲ್ಲಿರುವ ಆರ್ ಎಸ್ ಎಸ್ ನ ಶಕ್ತಿ ಕೇಂದ್ರ ಹಾಗೂ ಪ್ರಮುಖ ಕಚೇರಿಯ ಬಾಗಿಲನ್ನು ಎಡ ತಾಕೀದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಒಟ್ಟಾರೆ ಈ ಬಾರಿ ಚಿತ್ರದುರ್ಗ ಜಿಲ್ಲಾ ಬಿಜೆಪಿ ಎರಡು ಬಣಗಳಾಗಿದ್ದು, ಬೂದಿ‌ ಮುಚ್ಚಿದ ಕೆಂಡದಂತಾಗಿದ್ದು, ವಿರೋಧಿ ಬಣದ ಆಕ್ರೋಶ ಸ್ಪೋಟಗೊಳ್ಳುವ ದಿನಗಳು ದೂರವಿಲ್ಲ.

 

 

 

Leave a Reply

Your email address will not be published. Required fields are marked *