ಇಲ್ಲಿನ ಸಬ್‍ರಿಜಿಸ್ಟಾರ್ ಕಚೇರಿಯಲ್ಲಿ ದೊಡ್ಡ ಮಟ್ಟದಲ್ಲಿ ಲಂಚದ ಹಾವಳಿ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ನ್ಯಾಯವಾದಿ ಹಾಗೂ ನರೇಂದ್ರಮೋದಿ ಅಭಿಮಾನಿಗಳ ಸಂಘದ ಅಧ್ಯಕ್ಷ ಪಿ.ಲೀಲಾಧರ ಠಾಕೂರ್ ದೂರಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಬ್‍ರಿಜಿಸ್ಟಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲಕ್ಷ್ಮಿ ತುಳಸಿ ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನಲ್ಲಿ ಕೆಲಸ ಮಾಡುವಾಗ ಲಂಚಕ್ಕೆ ಬೇಡಿಕೆಯಿಟ್ಟು ಅಮಾನತ್ತುಗೊಂಡು ಚಿತ್ರದುರ್ಗಕ್ಕೆ ವರ್ಗಾವಣೆಯಾಗಿ ಬಂದಿದ್ದಾರೆ. ಇಲ್ಲಿಯೂ ಸಹ ತಮ್ಮ ಹಳೆ ಚಾಳಿಯನ್ನು ಬಿಡದೆ ಕಚೇರಿಗೆ ರಿಜಿಸ್ಟ್ರೇಷನ್‍ಗಾಗಿ ಬರುವವರ ಜೀವ ಹಿಂಡುತ್ತಿದ್ದಾರೆ. ಈ ಸಂಬಂಧ ಲೋಕಾಯುಕ್ತ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಚೇರಿಗೆ ಬರುವ ಸಾರ್ವಜನಿಕರಿಗೆ ದಿಕ್ಕುತಪ್ಪಿಸಿ ಐದರಿಂದ ಹತ್ತು ಸಾವಿರ ರೂ.ಗಳ ಲಂಚ ಪೀಕುತ್ತಿದ್ದಾರೆ. ಹಣ ನೀಡಿದರೆ ಟೋಕನ್ ಇಲ್ಲದೆ ನೇರವಾಗಿ ನೊಂದಣಿ ಮಾಡಿಸಿಕೊಳ್ಳಬಹುದು. ಇಂತಹ ಭ್ರಷ್ಟ ಅಧಿಕಾರಿಯನ್ನು ಕೂಡಲೆ ಸೇವೆಯಿಂದ ಅಮಾನತ್ತುಪಡಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪಿ.ಲೀಲಾಧರ ಠಾಕೂರ್ ಒತ್ತಾಯಿಸಿದರು.
ನೊಂದಣಿಗಾಗಿ ಹಾಜರುಪಡಿಸಿದ ಕ್ರಯಪತ್ರ, ಪಾಲು ವಿಭಾಗ ಪತ್ರ, ದಾನಪತ್ರ, ಹಕ್ಕು ಬಿಡುಗಡೆ ಪತ್ರ, ಬ್ಯಾಂಕಿಗೆ ಅಡಮಾನ ಮಾಡುವ ಪತ್ರಗಳ ನೊಂದಣಿಗಾಗಿ ಇಲ್ಲಿ ಲಂಚ ಕೊಡಲೇಬೇಕು. ಮಾರುಕಟ್ಟೆ ಬೆಲೆಯ ಪ್ರತಿ ಒಂದು ಲಕ್ಷ ರೂ.ಗಳಿಗೆ ಒಂದು ಸಾವಿರ ರೂ.ಗಳನ್ನು ಫಿಕ್ಸ್ ಮಾಡಲಾಗಿದೆ. ಇಲ್ಲವಾದರೆ ನೊಂದಣಿಯಾಗುವುದಿಲ್ಲ. ನ್ಯಾಯಾಧೀಶರೊಬ್ಬರ ಗನ್‍ಮ್ಯಾನ್‍ಗೂ ಇಲ್ಲಿನ ಲಂಚದ ಬಿಸಿ ತಾಕಿದೆ ಎಂದರು.
ನಗರಸಭೆ ಮಾಜಿ ಸದಸ್ಯ ಬಿ.ಎಲ್.ರವಿಶಂಕರ್‍ಬಾಬು ಮಾತನಾಡಿ ಚಿತ್ರದುರ್ಗ ಸಬ್‍ರಿಜಿಸ್ಟರ್ ಕಚೇರಿಯಲ್ಲಿ ಭ್ರಷ್ಠಾಚಾರ ಮಿತಿ ಮೀರಿದೆ. ಆಸ್ತಿಗಳ ಮಾರಾಟ ಹಾಗೂ ನೊಂದಣಗೆÂ ಬರುವವರಿಂದ ಮನಸೋ ಇಚ್ಚೆ ಲಂಚದ ಹಣಕ್ಕೆ ಬೇಡಿಕೆಯಿಡುತ್ತಿರುವುದು ಯಾವ ನ್ಯಾಯ. ಕೇಳಿದಷ್ಟು ಲಂಚ ಕೊಡದಿದ್ದರೆ ಯಾವ ನೊಂದಣಿಯೂ ಆಗುವುದಿಲ್ಲ. ಸ್ಥಳೀಯ ಶಾಸಕರು ಇತ್ತ ಗಮನಹರಿಸಿ ಇಲ್ಲಿ ನಡೆಯುತ್ತಿರುವ ಹಗರಣಗಳನ್ನು ನಿಯಂತ್ರಿಸಬೇಕಿದೆ ಎಂದು ಮನವಿ ಮಾಡಿದರು.