ಆರೋಗ್ಯವಂತ ಮಕ್ಕಳಿಂದ ದೇಶ ಬಲಿಷ್ಠ

ಜಿಲ್ಲಾ ಸುದ್ದಿ

ಆರೋಗ್ಯವಂತ ಮಕ್ಕಳಿಂದ ದೇಶ ಬಲಿಷ್ಠ

 

 

 

ಆರೋಗ್ಯವಂತ ಮಕ್ಕಳಿಂದ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಚಿತ್ರದುರ್ಗ-ಭರಮಸಾಗರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಮಾಸಾಚರಣೆ ಹಾಗೂ ಪ್ರಧಾನ ಮಂತ್ರಿ ಮಾತೃವಂದನಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಆರೋಗ್ಯವಾಗಿದ್ದರೆ ಮಾತ್ರ ಆರೋಗ್ಯ ಮತ್ತು ಸದೃಢ ದೇಶ ನಿರ್ಮಿಸಲು ಸಾಧ್ಯ. ಪೌಷ್ಠಿಕಾಂಶವಿರುವ ಆಹಾರ ಸೇವಿಸುವುದರ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಗು ಹೊಟ್ಟೆಯಲ್ಲಿದ್ದಾಗಲೇ ಗರ್ಭಿಣಿ ಯಾವ ರೀತಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಹಾಗೂ ಮಗು ಜನನದ ಬಳಿಕ ಬಾಣಂತಿ ಹಾಗೂ ಮಗು ಯಾವ ರೀತಿಯ ಪೌಷ್ಠಿಕ ಆಹಾರ ಸೇವಿಸುವುದರ ಮೂಲಕ ಉತ್ತಮ ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿ ದೇವಿ ಮಾತನಾಡಿ, ಗರ್ಭಿಣಿಯರಿಗೆ ಪೌಷ್ಠಿಕಯುಕ್ತ ಆಹಾರ ತುಂಬ ಅವಶ್ಯಕವಾಗಿರುತ್ತದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾಕಾರ್ಯಕರ್ತರು ಗರ್ಭಿಣಿಯರಿಗೆ ಪೌಷ್ಠಿಕಯುಕ್ತ ಆಹಾರವನ್ನು ತಲುಪಿಸುತ್ತಿದ್ದಾರೆ. ತೀವ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳನ್ನು ಹೊರ ತರಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಆಹಾರದ ಬಗ್ಗೆ ಎಲ್ಲರಿಗೂ ಅರಿವಿರಬೇಕು. ಪೌಷ್ಠಿಕ ಆಹಾರ ಸೇವನೆಯಿಂದ ಮನುಷ್ಯ ಸದೃಢವಾಗುತ್ತಾನೆ. ಆಗ ದೇಶವನ್ನು ಸಹ ಸದೃಢ ದೇಶವನ್ನಾಗಿ ಮಾಡಬಹುದು. ಆಹಾರ ಕ್ರಮದಲ್ಲಿ ಏರುಪೇರಾಗದಂತೆ ನಾವು ಆಹಾರ ಸೇವಿಸಬೇಕು ಎಂದು ತಿಳಿಸಿದರು.
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಾಧಿಕಾರಿ ಡಾ.ಗಂಗಾಧರ ವರ್ಮ ಉಪನ್ಯಾಸ ನೀಡಿ, ನಮ್ಮ ದಿನನಿತ್ಯದ ಆಹಾರವೇ ನಮಗೆ ಔಷಧಿಯಾಗಬೇಕು. ಸರಿಯಾದ ಸಮಯಕ್ಕೆ ದೇಹಕ್ಕೆ ಬೇಕಾದ ಪೌಷ್ಠಿಕ ಆಹಾರ ಸೇವಿಸುವುದರಿಂದ ನಮ್ಮ ಬಳಿ ಕಾಯಿಲೆ ಸುಳಿಯುವುದೇ ಇಲ್ಲ. ನಮ್ಮ ದೇಹಕ್ಕೆ  ಚೆನ್ನಾಗಿ ಜೀರ್ಣವಾಗುವ  ಆಹಾರ ಸೇವಿಸಿದಾಗ ಮಾತ್ರ  ದೇಹಕ್ಕೆ ಬೇಕಾದ ಪೌಷ್ಠಿಕಾಂಶ ಸಿಗುತ್ತದೆ ಎಂದು ತಿಳಿಸಿದರು.
ಹಣ್ಣು, ತರಕಾರಿ, ಬೇಯಿಸಿದ ಆಹಾರ ಸೇವಿಸುವುದರಿಂದ ಎಲ್ಲಾ ರೀತಿಯ ಪೌಷ್ಠಿಕಾಂಶಗಳು ನಮಗೆ  ದೊರೆಯುತ್ತವೆ. ಸಂಗ್ರಹಿಸಿದ ಆಹಾರವನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಕೂಲ್‍ಡ್ರಿಂಕ್ಸ್ ಹಾಗೂ ಜಂಕ್‍ಫುಡ್‍ಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಹದಗೆಡುತ್ತದೆ. ಆದಷ್ಟು ನಾವು ಪ್ರಕೃತಿ ದತ್ತವಾಗಿ ಸಿಗುವ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಹಿರಿಯೂರಿನ ಬಬ್ಬೂರು ಫಾರಂನ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶಶಿಕಲಾ ಬಾಯಿ ಉಪನ್ಯಾಸ ನೀಡಿ, ನಮ್ಮ ಮನೆಯಲ್ಲಿರುವ ಪದಾರ್ಥಗಳನ್ನು ನಾವು ಪೌಷ್ಠಿಕಯುಕ್ತ ಆಹಾರವನ್ನಾಗಿ ಮಾಡಿ ಸೇವಿಸಬಹುದು. ಹಾಲಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಸೇವನೆ ಮಾಡುವುದರಿಂದಲೂ ಪೌಷ್ಠಿಕಾಂಶ ಸಿಗುತ್ತದೆ. ಅಕ್ಕಿ, ಸಕ್ಕರೆ, ಮೈದಾದಿಂದ ಮಾಡಿದ ಪದಾರ್ಥಗಳಿಂದ ಆದಷ್ಟು ನಾವು ದೂರವಿದ್ದು ಸಿರಿಧಾನ್ಯಗಳನ್ನು ಸೇವಿಸಬೇಕು ಎಂದರು.
ಜೀರ್ಣಕ್ರೀಯೆಗೆ ಸಹಾಯವಾಗುವಂತಹ ಪದಾರ್ಥಗಳನ್ನು ಮಾತ್ರ ನಾವು ಸೇವಿಸಬೇಕು. ಪ್ರತಿನಿತ್ಯ ಯಾವ ರೀತಿಯ ಪೌಷ್ಠಿಕ ಆಹಾರ ಸೇವಿಸಬೇಕು ಮತ್ತು ಮಕ್ಕಳಿಗೆ ಯಾವ ರೀತಿಯ ಪೌಷ್ಠಿಕ ಆಹಾರ ನೀಡಬೇಕು ಎಂಬುದು ನಮ್ಮ ಕೈಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮತ್ತು ಅಂಗನವಾಡಿ ಮೇಲ್ವಿಚಾರಕರು ಹಾಗೂ ಕಾರ್ಯಕರ್ತೆಯರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಪೋಷಣ್ ಮಾಸಾಚರಣೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು.ಗಿರೀಶ್, ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್, ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಾಣಾಧಿಕಾರಿ ಕೆಂಪಹನುಮಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸುಧಾ, ಪಿ.ಲೋಕೇಶ್ವರಪ್ಪ ಸೇರಿದಂತೆ ಮತ್ತಿತರರು ಇದ್ದರು

Leave a Reply

Your email address will not be published. Required fields are marked *