ಮಹಾ ಶಿವರಾತ್ರಿ ಮಹೋತ್ಸವ ಮಾ.4 ರಿಂದ 9 ರವೆರೆಗೆ

ಜಿಲ್ಲಾ ಸುದ್ದಿ

೯೪ನೇ ಮಹಾ ಶಿವರಾತ್ರಿ ಮಹೋತ್ಸವವೂ ಮಾ. ೪ ರಿಂದ ೯ರವರೆಗೆ ಚಿತ್ರದುರ್ಗ ನಗರದ ಶ್ರೀ ಕಬೀರಾನಂದಾಶ್ರಮದ ವತಿಯಿಂದ ಶ್ರೀಮಠದ ಆವರಣದಲ್ಲಿ ನಿರ್ಮಿತವಾಗಿರುವ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಮಹಾ ಮಂಟಪದಲ್ಲಿ ನಡೆಯಲಿದ್ದು, ಇದರಲ್ಲಿ ಪ್ರತಿ ದಿನ ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು, ವಿಚಾರವಂತರು ಆಗಮಿಸುವುದರ ಮೂಲಕ ತಮ್ಮ ವಿಚಾರಧಾರೆಯನ್ನು ನೀಡಲಿದ್ದಾರೆ ಎಂದು ೯೪ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು ತಿಳಿಸಿದರು.
ನಗರದ ಶ್ರೀಮಠದ ಆವರಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತಾಡಿದರು. ಮಾ.೪ರ ಸಂಜೆ ಸಭಾಮಂಟಪವನ್ನು ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಹಾಗೂ ಕಾರ್ಯಕ್ರಮವನ್ನು ಶಾಸಕ ವೀರೆಂದ್ರ ಪಪ್ಪಿ ಉದ್ಘಾಟಿಸಲಿದ್ದಾರೆ.
ಮಾ.೫ರಂದು ಶಿವನಾಮ ಸಪ್ತಾಹದಲ್ಲಿ ಕೇಂದ್ರ‌ ಸಚಿವ ಎ.ನಾರಾಯಣಸ್ವಾಮಿ ಪಾಲ್ಗೊಳ್ಳಲಿದ್ದಾರೆ.
ಮಾ. ೬ರ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಬೆಂಗಳೂರಿನ ಗವಿಪುರಂನ ಶ್ರೀ ಭವಾನಿ ದತ್ತ ಮಠದ ಶ್ರೀ ಮಂಜುನಾಥ್ ಭಾರತಿ ಶ್ರೀಗಳು, ಹಾಸನದ ಶ್ರೀ ಆದಿಚುಂಚುನಗಿರಿಯ ಶಾಖಾ ಮಠದ ಶ್ರೀ ಶಂಬುನಾಥ್ ಶ್ರೀಗಳು, ಚಿತ್ರದುರ್ಗದ ಯೋಗವನ ಬೆಟ್ಟದ ವನಶ್ರೀ ಮಠದ ಅಧ್ಯಕ್ಷರಾದ ಡಾ.ಶ್ರೀ ಬಸವಕುಮಾರ್ ಶ್ರೀಗಳು ವಹಿಸಲಿದ್ದಾರೆ. ಮಾ.೭ರ ಸಂಜೆ ೬.೩೦ಕ್ಕೆ ನಡೆಯುವ ಕಾರ್ಯಕ್ರಮದ ಸಾನಿದ್ಯವನ್ನು ಹೊಸದುರ್ಗದ ಮದುರೆಯ ಬ್ರಹ್ಮವಿದ್ಯಾನಗರದ ಶಿಲಾಪುರಿ ಉಪ್ಪಾರ ಭಗೀರಥ ಮಹಾ ಸಂಸ್ಥಾನದ ಶ್ರೀ ಪುರುಷೋತ್ತಮಾನಂದಪುರಿ ಶ್ರೀಗಳು, ಶೃಂಗೇರಿಯ ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ್ ಶ್ರೀಗಳು, ಚಿಕ್ಕಬಳಾಪುರದ ಶ್ರೀ ಮಂಗಳನಾಥ್ ಶ್ರೀಗಳು ವಹಿಸಲಿದ್ದಾರೆ.
ಮಾ.೮ ಮಧ್ಯಾಹ್ನ ೨.೩೦ಕ್ಕೆ ನಗರದ ರಾಜ ಬೀದಿಗಳಲ್ಲಿ ಶ್ರೀ ಕಬೀರಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ ನಡೆಯಲಿದೆ, ಇದರ ಉದ್ಘಾಟನೆಯನ್ನು , ೯೪ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು ನೇರವೇರಿಸಲಿದ್ದಾರೆ. ಇದರಲ್ಲಿ ಕೀಲುಕುದುರೆ, ತಮಟೆ, ಜಾಂಜ್ ನೃತ್ಯ, ಕಿನ್ನರಿಜೋಗಿ, ಲಂಬಾಣಿ ನೃತ್ಯ, ಖಾಸಾಬೇಡರಪಡೆ, ಡೊಳ್ಳು ಕುಣಿತ, ಕೋಲಾಟ ಭಜನೆ ಶಾರದ ಬ್ರಾಸ್ ಬ್ಯಾಂಡ್ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ.
ಸಂಜೆ ೭ಕ್ಕೆ ನಡೆಯುವ ಕಾರ್ಯಕ್ರಮ ಮುಂದುವರೆಯಲಿದೆ. ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳ ಆದೇಶದಂತೆ ಚಿತ್ರದುರ್ಗದಲ್ಲಿ ಮಾನವರ ಕಲ್ಯಾಣಕ್ಕಾಗಿ ಸ್ಥಾಪಿಸಿದ ಆದ್ವೈತ, ಜಾತ್ಯಾತೀತ ಸಂಪ್ರದಾಯ ಮಠವೇ ಶ್ರೀ ಸದ್ಗುರು ಕಬೀರಾನಂದ ಆಶ್ರಮವಾಗಿದೆ. ಗುರುಗಳ ಪರಂಪರೆಯಂತೆ ಪ್ರತಿ ವರ್ಷವೂ ಶಿವನಾಮ ಸಪ್ತಾಹವನ್ನು ಮಹಾ ಶಿವರಾತ್ರಿ ಸಮಯದಲ್ಲಿ ನಡೆಸಿಕೊಂಡು ಬರುತ್ತಿದೆ. ಇದು ಮಠದ ವೈಶಿಷ್ಟವಾಗಿದೆ. ಶಿವನಾಮ ಸಪ್ತಾಹವನ್ನು ಜಾತಿ-ಮತಗಳ ಚೌಕಟ್ಟನ್ನು ಮೀರಿ ನಾಡಿನ ಜನರ ಭಾವೈಕ್ಯ ಸಾಧನೆಯನ್ನು ಮಾಡಲಾಗುತ್ತಿದೆ ಎಂದರು.
ಶಿವರಾತ್ರಿ ಎಂದರೆ ಶಿವನನ್ನು ಭಕ್ತಿಯಿಂದ ಆದಿನ ಆರಾಧನೆ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶನ ಮಾಡಬೇಕಿದೆ. ಶಿವ ದಕ್ಷಿಣ ಪ್ರಾಂತ್ಯದವನು ಎನ್ನವುದು ಹೆಮ್ಮೆಯ ವಿಷಯವಾಗಿದೆ, ೧೯೨೪ರಿಂದ ಚಿತ್ರದುರ್ಗದ ಕಬೀರಾನಂಧಾಶ್ರಮದಲ್ಲಿ ಶಿವರಾತ್ರಿ ಸಪ್ತಾಹ ಪ್ರಾರಂಭವಾಯಿತು. ಆರಂಭದಲ್ಲಿ ಅಷ್ಟಾಗಿ ಬೆಳಕಿಗೆ ಬಾರದೆ ಶ್ರೀಮಠದಲ್ಲಿ ಸೂಕ್ತವಾಗಿ ನಡೆಯುತ್ತಾ ಬರುತ್ತಿತ್ತು. ಇತ್ತೀಚಿನ ದಿನಮಾನದಲ್ಲಿ ಇದು ಬೆಳಕಿಗೆ ಬರುವುದರ ಮೂಲಕ ಮಧ್ಯ ಕರ್ನಾಟಕದಲ್ಲಿ ಹಬ್ಬವಾಗಿ ರೂಪುಗೊಂಡಿದೆ, ಶಿವರಾತ್ರಿ ಎಂದರೆ ಕಬೀರಾನಂದಾಶ್ರಮ, ನವರಾತ್ರಿ ಎಂದರೆ ಮುರುಘಾ ಮಠ ಎಂಬ ಅರ್ಥದಲ್ಲಿ ಬರುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧಿಶರು ಆಗಮಿಸುವುದರ ಮೂಲಕ ತಮ್ಮ ಮಾತಿನ ಮೂಲಕ ಪಾಂಡಿತ್ಯವನ್ನು ಪ್ರದರ್ಶನ ನೀಡಲಿದ್ದಾರೆ. ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಅಗತ್ಯ ಇದೆ. ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರವನ್ನು ಕಲಿಸುವವರೇ ಮೊಬೈಲ್ ದೂರದರ್ಶನದ ಮೊರೆ ಹೋಗಿದ್ದಾರೆ. ನಮ್ಮ ಮನಸ್ಸುನ್ನು ಸಂಸ್ಕಾರದ ಕಡೆ ಒಲವನ್ನು ಮೂಡಿಸಬೇಕಿದೆ ಎಂದರು.
ಗೋಷ್ಟಿಯಲ್ಲಿ ಕಾರ್ಯದರ್ಶಿ ಪ್ರಶಾಂತ್, ಸಮಿತಿಯ ಉಪಾಧ್ಯಕ್ಷರಾದ ಸಿದ್ದವ್ವನಹಳ್ಳಿ ಪರಮೇಶ್, ಸದಸ್ಯರಾದ ಓಂಕಾರ್, ಪ್ರತಾಪ್ ಜೋಗಿ, ಗೋಪಾಲಸ್ವಾಮಿ ನಾಯ್ಕ್, ನಾಗರಾಜ್ ಸಗಂ ಸತೀಶ್, ರುದ್ರೇಶ್, ನಿರಂಜನ, ತಿಪ್ಪೇಸ್ವಾಮಿ, ಗಣಪತಿ ಶಾಸ್ತ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

 

Leave a Reply

Your email address will not be published. Required fields are marked *