ಹಿಜಾಬ್ ಮಹತ್ವದ ವಿಚಾರಣೆ ಸುಪ್ರಿಂಕೋರ್ಟ್ ನಲ್ಲಿ

ರಾಜ್ಯ

ಹಿಜಾಬ್ ಇಂದು ಮಹತ್ವದ ವಿಚಾರಣೆ

ಕರ್ನಾಟಕ ಸರ್ಕಾರ ಹೊರಡಿಸಿದ್ದ ಹಿಜಾಬ್ ನಿಷೇಧದ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​​ನಲ್ಲಿ ಸಲ್ಲಿಸಲಾದ ಸುಮಾರು 23 ಅರ್ಜಿಗಳ ವಿಚಾರಣೆ ಇಂದು ನಡೆಯಲಿದೆ.
ನವದೆಹಲಿ: ಭಾರತದ ಸುಪ್ರೀಂ ಕೋರ್ಟ್​ ಇಂದು ಕರ್ನಾಟಕದ ಹಿಜಾಬ್ ನಿಷೇಧದ ಪ್ರಕರಣದ ವಿಚಾರಣೆ ನಡೆಸಲಿದೆ

 

 

 

ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸದಂತೆ ಸರ್ಕಾರ ಆದೇಶ ನೀಡಿದ್ದಕ್ಕೆ ರಾಜ್ಯಾದ್ಯಂತ ಭಾರೀ ಗಲಾಟೆ, ಪ್ರತಿಭಟನೆಗಳು ನಡೆದಿದ್ದವು. ಹಲವು ವಿದ್ಯಾರ್ಥಿನಿಯರು ಪರೀಕ್ಷೆಯನ್ನೂ ಬಹಿಷ್ಕರಿಸಿದ್ದರು. ಈ ಪ್ರಕರಣದ ಕುರಿತು ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಲ್ಲಿ ಯೂನಿಫಾರ್ಮ್ ಮಾತ್ರ ಧರಿಸಬೇಕು, ಯಾವುದೇ ಧರ್ಮ ಸೂಚಕ ಉಡುಪನ್ನು ಧರಿಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಬಗ್ಗೆ ಕರ್ನಾಟಕ ಹೈಕೋರ್ಟ್​ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಇಂದು ಸುಪ್ರೀಂ ಕೋರ್ಟ್​ ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು ಇಂದು ಹಿಜಾಬ್ ನಿಷೇಧದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.
ಕರ್ನಾಟಕ ಸರ್ಕಾರ ಹೊರಡಿಸಿದ್ದ ಹಿಜಾಬ್ ನಿಷೇಧದ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​​ನಲ್ಲಿ ಸಲ್ಲಿಸಲಾದ ಸುಮಾರು 23 ಅರ್ಜಿಗಳ ವಿಚಾರಣೆಯನ್ನು ಇಂದು ನ್ಯಾಯಪೀಠ ನಡೆಸಲಿದೆ. ಇವುಗಳಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವ ಹಕ್ಕನ್ನು ಕೋರುವ ರಿಟ್ ಅರ್ಜಿಗಳು ಕೂಡ ಇವೆ.
ಭಾರತದ ಹಿಂದಿನ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್‌ವಿ ರಮಣ ಅವರ ಅವಧಿಯಲ್ಲಿ ಈ ವಿಷಯವನ್ನು ವಿಚಾರಣೆಗೆ ಪಟ್ಟಿ ಮಾಡಿರಲಿಲ್ಲ. ತುರ್ತು ವಿಚಾರಣೆಯ ತಿಂಗಳುಗಳ ನಂತರ ಈ ವಿಷಯವು ಇಂದು ವಿಚಾರಣೆಗೆ ಬರಲಿದೆ. ಇದು ಭಾರತದ ಹೊಸ ಮುಖ್ಯ ನ್ಯಾಯಮೂರ್ತಿಯಾಗಿರುವ ಯು.ಯು ಲಲಿತ್ ಅವರ ಮೊದಲ ಕೆಲಸದ ದಿನವಾಗಿದೆ ಎಂಬುದು ವಿಶೇಷ.


ಕಳೆದ ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ಪ್ರಕಾರ, ಸರ್ಕಾರ, ಶಾಲಾ ಆಡಳಿತ ಮಂಡಳಿ, ಸಮಿತಿ ಇತ್ಯಾದಿಗಳು ಶಿಕ್ಷಣ ಸಂಸ್ಥೆಯಗಳ ವಿದ್ಯಾರ್ಥಿಗಳಿಗೆ ಹೊರಡಿಸಿದ ಏಕರೂಪದ ಡ್ರೆಸ್ ಕೋಡ್ ಅನ್ನು ವಿದ್ಯಾರ್ಥಿಗಳು ಅನುಸರಿಸಬೇಕು. ಈ ತೀರ್ಪಿನ ಮೂಲಕ ಹೈಕೋರ್ಟ್​ ಕರ್ನಾಟಕ ರಾಜ್ಯ ಸರ್ಕಾರವು ಫೆಬ್ರವರಿಯಲ್ಲಿ ಶಾಲಾ-ಪಿಯು ಕಾಲೇಜುಗಳಿಗೆ ವಿಧಿಸಿದ್ದ ಸ್ಕಾರ್ಫ್ (ಹಿಜಾಬ್) ನಿಷೇಧವನ್ನು ಎತ್ತಿ ಹಿಡಿದಿತ್ತು.ವಿದ್ಯಾರ್ಥಿಗಳಿಗೆ ಏಕರೂಪದ ಡ್ರೆಸ್ ಕೋಡ್‌ ಜಾರಿ ಮಾಡುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ ಎಂದು ಹೈಕೋರ್ಟ್​ ಹೇಳಿತ್ತು. ಇಸ್ಲಾಂ ಧರ್ಮವನ್ನು ಅನುಸರಿಸುವ ಮಹಿಳೆಯರಿಗೆ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಕೂಡ ಕರ್ನಾಟಕ ಹೈಕೋರ್ಟ್ ಹೇಳಿತ್ತು. ನ್ಯಾಯಮೂರ್ತಿಗಳಾದ ರಿತು ರಾಜ್ ಅವಸ್ತಿ, ಕೃಷ್ಣ ದೀಕ್ಷಿತ್ ಮತ್ತು ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು ಮಾರ್ಚ್ 15ರಂದು ಈ ಆದೇಶವನ್ನು ನೀಡಿತ್ತು. ಇದಕ್ಕೆ ಭಾರೀ ವಿರೋಧವೂ ವ್ಯಕ್ತವಾಗಿತ್ತು.

Leave a Reply

Your email address will not be published. Required fields are marked *