ಹಣ ದುರುಪಯೋಗವಾದರೆ ಬೆಲೆ ತೆರಬೇಕಾಗುತ್ತದೆ

ರಾಜ್ಯ

ಮೊದಲ ಹಾಗೂ ಎರಡನೇ ಹಂತದ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಿಲು ಡಿಸೆಂಬರ್‍ವರೆಗೆ ಗಡುವು  ಎಲ್.ಕೆ.ಅತೀಕ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ

 

 

 

ಮೊದಲ ಹಾಗೂ ಎರಡನೇ ಹಂತದಲ್ಲಿ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದ ಒಳಗೆ ಪೂರ್ಣಗೊಳಿಸಬೇಕು. ಮೂರನೇ ಹಂತದ ಕಾಮಗಾರಿಗಳನ್ನು ಮಾಚ್-2023 ಹಾಗೂ ನಾಲ್ಕನೇ ಹಂತದ ಕಾಮಗಾರಿಗಳನ್ನು ಡಿಸೆಂಬರ್-2023 ರ ಒಳಗೆ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾ.ಪಂ.ಅಧ್ಯಕ್ಷರು, ಸದಸ್ಯರು, ಜನ ಪ್ರತಿನಿಧಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಮ್ಮ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲಜೀವನ್ ಮಿಷನ್ ಕಾಮಗಾರಿ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ, ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು. ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳನ್ನು ಹರ್ ಘರ್ ಜಲ್ ಯೋಜನೆಯಡಿ ಪ್ರಮಾಣೀಕರಿಸಬೇಕು. ನೀರಿನ ಸಂಪರ್ಕಕ್ಕೆ ಬಳಸುವ ಪೈಪ್, ನಳಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಪ್ರತಿ ಗ್ರಾಮಗಳಲ್ಲಿ ಸೂಕ್ತವಾದ ಸ್ಥಳದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಬೇಕು. ನೀರು ಸರಬರಾಜಿನಲ್ಲಿ ಯಾವುದೇ ತೊಂದರೆಯಾಗಬಾರದು. ಯೋಜನೆ ಅನುಷ್ಠಾನದಲ್ಲಿ ಹಿಂದೆ ಉಳಿದಿರುವ ತಾಲೂಕುಗಳು ಪ್ರಗತಿ ಸಾಧಿಸಬೇಕು. ನಳದ ಸಂಪರ್ಕದೊಂದಿಗೆ ಆಧಾರ್ ಮಾಹಿತಿಯನ್ನು ನೊಂದಣಿ ಮಾಡಬೇಕು ಎಂದರು.


2021-22 ಸಾಲಿನಲ್ಲಿ 63.18 ಲಕ್ಷ ಮಾನವ ದಿನಗಳ ಗುರಿ ನಿಗಿದಿ ಪಡಿಸಲಾಗಿತ್ತು, ಇದರಲ್ಲಿ 62.97 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.99.66 ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 52 ಲಕ್ಷ ಮಾನವದಿನಗಳ ಗುರಿ ನಿಗದಿ ಪಡಿಸಲಾಗಿದ್ದು, ಇಲ್ಲಿಯವರೆಗೆ 26.80 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಶೇ.51.55 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಸಭೆಯಲ್ಲಿ ಮಾಹಿತಿ ನೀಡಿದರು.
ಅಪೂರ್ಣ ನರೇಗಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿಗೆ ನರೇಗಾದಡಿ ಕಡಿಮೆ ಗುರಿಯನ್ನು ನೀಡಲಾಗಿದೆ. ಕಡಿಮೆ ಮಾನವ ದಿನಗಳನ್ನು ಸೃಜನೆ ಮಾಡಿರುವ ಚಿತ್ರದುರ್ಗ, ಹೊಸದುರ್ಗ ಹಾಗೂ ಹೊಳಲ್ಕೆರೆ ತಾ.ಪಂ.ಗಳು ಹೆಚ್ಚಿನ ಪ್ರತಿ ಸಾಧಿಸಬೇಕು ಎಂದು ಸೂಚನೆ ನೀಡಿದ ಎಲ್.ಕೆ.ಅತೀಕ್ ಹೇಳಿದರು.
ಹೊಸದುರ್ಗ ತಾಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದಿರುವುದರಿಂದ ನರೇಗಾದಡಿ ನಿಗದಿತ ಪ್ರಮಾಣದ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಅನುಮೋದನೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಇಓ ಸ್ಪಷ್ಟನೆ ನೀಡಿದರು.
ದ್ರವತಾಜ್ಯ ನಿರ್ವಹಣೆಗೆ ನರೇಗಾ, 15 ಹಣಕಾಸು ಯೋಜನೆ ಹಾಗೂ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಗಳಲ್ಲಿ ಅನುದಾನ ಲಭ್ಯವಾಗುತ್ತಿದೆ. ಜಿ.ಪಂ.ಗಳು ದ್ರವತಾಜ್ಯ ನಿರ್ವಹಣೆಗೆ ಕಾಮಗಾರಿಗಳಿಗೆ ಸ್ವಚ್ಛ ಭಾರತ್ ಮಿಷನ್ ಅನುದಾನವನ್ನು ಹೆಚ್ಚಿಗೆ ಬಳಕೆ ಮಾಡಿಕೊಳ್ಳಬೇಕು. ಡಿಸೆಂಬರ್ ಅಂತ್ಯದ ಒಳಗೆ 2018 ರಿಂದ 2022 ಸಾಲಿನ ವರೆಗೆ ಬಾಕಿ ಇರುವ ನರೇಗಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಎಲ್.ಕೆ.ಅತೀಕ್ ಸೂಚನೆ ನೀಡಿದರು.
ಅವ್ಯವಹಾರ ನಡೆಸಿದವರ ಮೇಲೆ ಎಫ್.ಐ.ಆರ್. ದಾಖಲಿಸಿ: ಹಣ ವಸೂಲಿಗೆ ಕ್ರಮ ಕೈಗೊಳ್ಳಿ
ಸಭೆಯಲ್ಲಿ 2021-22 ಸಾಲಿನ ವರೆಗಿನ ಗ್ರಾಮ ಪಂಚಾಯತಿಗಳ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯ ಮಾಹಿತಿ ಪಡೆದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಕಾಮಗಾರಿಯನ್ನು ಕೈಗೊಳ್ಳದೆ ಸುಳ್ಳು ಬಿಲ್ಲು ಸೃಜಿಸಿ, ಅವ್ಯವಹಾರ ನಡೆಸಿದವರ ಮೇಲೆ ಎಫ್.ಐ.ಆರ್. ದಾಖಲಿಸಿ, ಹಣ ವಸೂಲಿಗೆ ಕ್ರಮಕೈಗೊಳ್ಳೂವಂತೆ ತಾ.ಪಂ. ಇಓ ಗಳಿಗೆ ನಿರ್ದೇಶನ ನೀಡಿದರು.
ಸಂಬಂಧ ಪಟ್ಟ ಎಲ್ಲಾ ಇಲಾಖೆಗಳು ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಕಾಮಗಾರಿಗಳ ಅನುಷ್ಠಾನದಲ್ಲಿ ಅವ್ಯವಹಾರ ಕಂಡು ಬಂದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಹಣವನ್ನು ವಸೂಲಿ ಮಾಡಬೇಕು. ಒತ್ತಡ, ಆಮಿಷಗಳಿಗೆ ಓಳಗಾಗಿ ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿಯಾದರೆ, ತಕ್ಕ ಬೆಲೆ ತೆರಬೇಕಾಗುತ್ತದೆ. ಸರ್ಕಾರ ಹಣ ದುರಪಯೋಗವಾಗಬಾರದು ಎಂದರು.
ಜಿಲ್ಲೆಯಲ್ಲಿ 2021-22 ಸಾಲಿನ ವರೆಗೆ ಒಟ್ಟು 1136 ಅವ್ಯವಹಾರ ಪ್ರಕರಣಗಳ ಬಾಕಿಯಿವೆ. ಒಟ್ಟು 1.99 ಕೋಟಿ ರೂಪಾಯಿ ಹಣ ವಸೂಲಾತಿಗೆ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ಶಿಫಾರಸ್ಸು ಮಾಡಿದೆ. ಇದರಲ್ಲಿ 44 ಪ್ರಕರಣಗಳಲ್ಲಿ ಕಾಮಗಾರಿ ಕೈಗೊಳ್ಳದೆಯೇ ಬಿಲ್ಲುಗಳನ್ನು ಸೃಜಿಸಿ ಹಣ ಪಡೆದು ವಂಚಿಸಲಾಗಿದೆ. 308 ಪ್ರಕರಣಗಳಲ್ಲಿ ಕಾಮಗಾರಿ ಹೆಚ್ಚಿನ ಪಾವತಿ ಮಾಡಲಾಗಿದೆ. 47 ಪ್ರಕರಣಗಳಲ್ಲಿ ಸತ್ತವರು, ಇತರೆ ವ್ಯಕ್ತಿಗಳ ಹೆಸರಿನಲ್ಲಿ ವಿವಿಧ ಯೋಜನೆಗಳ ಲಾಭ ಪಡೆಯಲಾಗಿದೆ. 4 ಪ್ರಕರಣದಲ್ಲಿ ಮದುವೆಯಾಗಿ ಬೇರೆಯಡಿ ಹೋದ ಹೆಣ್ಣುಮಕ್ಕಳ ಹೆಸರಿನಲ್ಲಿ ಯೋಜನೆ ಲಾಭ ಪಡೆಯಲಾಗಿದೆ. 2 ಪ್ರಕರಣಗಳಲ್ಲಿ ಇತರೆ ಲೆಕ್ಕ ಶೀರ್ಷಿಕೆಯಡಿ ಪಾವತಿ ಮಾಡಲಾಗಿದೆ. 56 ಯೋಜನೆಗಳನ್ನು ಅನುಮತಿ ಇಲ್ಲದೇ ಕೈಗೊಳ್ಳಲಾಗಿದೆ. 24 ಕಾಮಗಾರಿಗಳು ಕಳಪೆ ಗುಣಮಟ್ಟದ್ದು ಆಗಿದ್ದು, ಮಾನವರ ಬದಲಿಗೆ ಯಂತ್ರೋಪಕರಣಗಳನ್ನು ಬಳಕೆ ಮಾಡಲಾಗಿದೆ. 651 ಕಾಮಗಾರಿಗಳಲ್ಲಿ ವಿವಿಧ ದೋಷಗಳನ್ನು ಕಂಡುಬಂದಿವೆ.
ಸಭೆಯಲ್ಲಿ ಜಿ.ಪಂ.ಸಿಇಓ ಡಾ.ಕೆ.ನಂದಿನಿದೇವಿ, ತೋಟಗಾರಿಕೆ ಇಲಾಖೆ ಉಪನಿರ್ದೇಕಿ ಸವಿತಾ, ತಾ.ಪಂ.ಇಓಗಳು, ಗ್ರಾಮೀಣ ಪಂಚಾಯತಿ ರಾಜ್ ಇಲಾಖೆ ಇಂಜಿನಿಯರ್‍ಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *