ದಲಿತ ಬಾಲಕಿಯರ ದುರ್ಬಳಕೆ ಸಿಎಂ ಬಳಿ‌ ನಿಯೋಗದ ಎಚ್ಚರಿಕೆ

ರಾಜ್ಯ

ದಲಿತ ಬಾಲಕಿಯರನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ದ ಒಂದು ವಾರದೊಳಗೆ ಪೊಲೀಸರು ಪೋಕ್ಸೋ ಕಾಯಿದೆಯಡಿ ಕೇಸು ದಾಖಲಿಸದಿದ್ದರೆ ರಾಜ್ಯದ ಮುಖ್ಯಮಂತ್ರಿ ಬಳಿ ದಲಿತರ ನಿಯೋಗ ಹೋಗುವುದಾಗಿ ಡಿಎಸ್‍ಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ಶ್ರೀನಿವಾಸ್ ಹೇಳಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮುರುಘಾಮಠದ ಡಾ.ಶಿವಮೂರ್ತಿ ಶರಣರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಇಬ್ಬರು ಬಾಲಕಿಯರನ್ನು ಒಂದುವರೆ ತಿಂಗಳುಗಳ ಕಾಲ ತಮ್ಮ ಹಿಡಿತದಲ್ಲಿಟ್ಟುಕೊಂಡವರ ಮೇಲೆ ಪೊಲೀಸರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ನಮಗೆ ಅನುಮಾನಕ್ಕೆ ಆಸ್ಪದವಾಗಿದೆ. ಬಾಲಕಿಯೊಬ್ಬಳ ಚಿಕ್ಕಪ್ಪ ದೂರು ನೀಡಿದರೂ ಇದುವರೆವಿಗೂ ಕ್ರಮ ಕೈಗೊಂಡಿಲ್ಲ. ಕೇಸನ್ನು ಧಪನ್ ಮಾಡುವ ಸಿದ್ದತೆ ನಡೆಯುತ್ತಿದೆ. ಎಂಟು ದಿನದೊಳಗೆ ಪೋಕ್ಸೋ ಕಾಯಿದೆಯಡಿ ಅಟ್ರಾಸಿಟಿ ಕೇಸು ದಾಖಲಿಸಿ ಅನ್ಯಾಯಕ್ಕೊಳಗಾಗಿರುವ ಬಾಲಕಿಯರಿಬ್ಬರಿಗೆ ತಲಾ ಹತ್ತು ಕೋಟಿ ರೂ.ಗಳನ್ನು ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ರಾಜಕೀಯ ಪ್ರಭಾವ ಬಳಸಿ ಇಬ್ಬರು ಬಾಲಕಿಯರನ್ನು ಒಂದುವರೆ ತಿಂಗಳುಗಳ ಕಾಲ ತಮ್ಮ ಸ್ವಾಧೀನದಲ್ಲಿಟ್ಟುಕೊಂಡಿದ್ದ ವ್ಯಕ್ತಿ ವಿರುದ್ದ ಪೋಕ್ಸೋ ಕಾಯಿದೆಯಡಿ ಅಟ್ರಾಸಿಟಿ ಕೇಸು ದಾಖಲಿಸಬೇಕು. ದಲಿತ ಹಾಗೂ ಉಪ್ಪಾರ ಜನಾಂಗಕ್ಕೆ ಸೇರಿದ ಇಬ್ಬರು ಬಾಲಕಿಯರನ್ನು ತಮ್ಮ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡು ಮಾನ ಹರಾಜು ಹಾಕಲಾಗಿದೆ. ಅವರ ಮುಂದಿನ ಭವಿಷ್ಯದ ಗತಿಯೇನು ಎನ್ನುವುದು ನಮ್ಮ ಪ್ರಶ್ನೆ ಎಂದು ಕಿಡಿಕಾರಿದರು.
ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಮಾತನಾಡಿ ದಲಿತ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಇಬ್ಬರು ಬಾಲಕಿಯರನ್ನು ಕೇಸಿನಲ್ಲಿ ಸಿಗಿಸುವ ಕುತಂತ್ರ ಮೇಲ್ವರ್ಗದಿಂದ ನಡೆಯುತ್ತಿದೆ. ಜು.24 ರಂದು ಬೆಂಗಳೂರು ಕಾಟನ್‍ಪೇಟೆಯಲ್ಲಿ ಈ ಬಾಲಕಿಯರು ದೂರು ನೀಡಲು ಹೋದಾಗ ಅಲ್ಲಿನ ಪೊಲೀಸರು ದೊಡ್ಡವರನ್ನು ಕರೆದುಕೊಂಡು ಬನ್ನಿ ಎಂದು ಹೇಳಿದಾಗ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ದಂಪತಿಗಳು ಠಾಣೆಗೆ ತೆರಳಿ ಬಾಲಕಿಯರು ನಮ್ಮವರೆ ಎಂದು ಹೇಳಿ ಕರೆದುಕೊಂಡು ಬಂದು ನಂತರ ಬಾಲಕಿಯರನ್ನು ಎಲ್ಲಿಟ್ಟರು ಎನ್ನುವುದೇ ಗೊತ್ತಾಗಲಿಲ್ಲ. ಇದೆಲ್ಲಾ ವ್ಯವಸ್ಥಿತ ಷಡ್ಯಂತ್ರ ಎನ್ನುವುದರಲ್ಲಿ ಅನುಮಾನವಿಲ್ಲ. ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಆ.26 ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಶರಣರ ವಿರುದ್ದ ದೂರು ದಾಖಲಾಗುತ್ತದೆ. ಇದಕ್ಕೆ ಕಾರಣಕರ್ತರಾದವರು ಯಾರು? ಇದರ ಹಿಂದಿರುವ ಕಾಣದ ಕೈಗಳನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು.
ಬಾಲಕಿಯರನ್ನು ಗುರಿಯಾಗಿಸಿಕೊಂಡವರ ವಿರುದ್ದ ಪೊಲೀಸರು ಏಕೆ ನಿರ್ಧಾಕ್ಷಿಣ್ಯವಾಗಿ ಕೇಸು ದಾಖಲಿಸುತ್ತಿಲ್ಲ. 35 ದಿನಗಳ ಕಾಲ ಬೇರೆಯವರ ಹಿಡಿತದಲ್ಲಿದ್ದ ಅಮಾಯಕ ಬಾಲಕಿಯರ ಮುಂದಿನ ಭವಿಷ್ಯವೇನು? ಶಿಕ್ಷಣ, ಸರ್ಕಾರಿ ನೌಕರಿ, ವಿವಾಹ ಇವೆಲ್ಲದರ ಮುತುವರ್ಜಿ ವಹಿಸುವರ್ಯಾರು ಎಂದು ಪ್ರಶ್ನಿಸಿದ ಹನುಮಂತಪ್ಪ ದುರ್ಗ ಇಬ್ಬರು ಬಾಲಕಿಯರಿಗೆ ತಲಾ ಹತ್ತು ಕೋಟಿ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಕುಂಚಿಗನಹಾಳ್ ಮಹಾಲಿಂಗಪ್ಪ ಮಾತನಾಡಿ ದಲಿತ ಬಾಲಕಿಯರನ್ನು ತಮ್ಮ ವೈಯಕ್ತಿಕ ಹಗೆತನಕ್ಕೆ ಬಳಸಿಕೊಂಡವರ ವಿರುದ್ದ ಪೋಕ್ಸೋ ಕಾಯಿದೆಯಡಿ ಅಟ್ರಾಸಿಟಿ ಕೇಸು ದಾಖಲಿಸದಿದ್ದರೆ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿಯೂ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ನ್ಯಾಯವಾದಿ ಕೆ.ರಾಜಪ್ಪ, ದಲಿತ ಮುಖಂಡ ಬಿ.ರಾಜಪ್ಪ, ನಗರಂಗೆರೆ ದೇವರಾಜ್, ಹರೀಶ್, ಕಣಿವೆಮಾರಮ್ಮ ಯುವಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಬೆಳಗಟ್ಟ, ಹರೀಶ್, ಗೋನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸೇರಿದಂತೆ ಅನೇಕ ದಲಿತ ಮುಖಂಡರುಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು

 

 

 

Leave a Reply

Your email address will not be published. Required fields are marked *