ಜನರ ಹಸಿವು ನೀಗಿಸಿದ ಹರಿಕಾರ ಬಾಬೂಜಿ: ಮಾಜಿ ಸಚಿವ ಎಚ್.ಆಂಜನೇಯ

ಜಿಲ್ಲಾ ಸುದ್ದಿ

 

ಜನರ ಹಸಿವು ನೀಗಿಸಿದ ಹರಿಕಾರ ಬಾಬೂಜಿ: ಮಾಜಿ ಸಚಿವ ಎಚ್.ಆಂಜನೇಯ

ನಾಡಿನ ಅನೇಕ ಮಹನೀಯರ ಜೀವನ ಚರಿತ್ರೆ ಯುವ ಪೀಳಿಗೆ ಅರಿತು, ಜೀವನದಲ್ಲಿ ಅಳವಡಿಸಿಕೊಂಡರೆ ತಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ತಾಲೂಕಿನ ಸೀಬಾರ ಸಮೀಪ ಬುಧವಾರ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ ಮಾತನಾಡಿದರು.

ಅನೇಕ ಮಹನೀಯರ ಜಯಂತಿಗಳನ್ನು ಸರ್ವ ಸಮುದಾಯ ಸೇರಿ ಒಗ್ಗೂಡಿ ಆಚರಿಸುವ ವಾತಾವರಣ ನಿರ್ಮಾಣವಾಗಬೇಕು. ಆಗ ಮಾತ್ರ ಜಾತ್ಯತೀತ ನೆಲೆಗಟ್ಟಿನಲ್ಲಿ ನಿರ್ಮಾಣಗೊಂಡಿರುವ ಭಾರತ ಇನ್ನೂ ಹೆಚ್ಚು ಬಲಿಷ್ಠವಾಗಲಿದೆ ಎಂದು ಹೇಳಿದರು.

ಇತ್ತೀಚೆಗೆ ಜಾತ್ಯತೀತ, ಶಾಂತಿ, ಬಹುತ್ವದ ಕಲ್ಪನೆ ಹೊಂದಿದ್ದ ಬುದ್ಧ, ಬಸವಣ್ಣ, ವಾಲ್ಮೀಕಿ, ಶ್ರೀಕೃಷ್ಣ, ಕನಕ, ಅಂಬೇಡ್ಕರ್ ಹೀಗೆ ಅನೇಕರ ಆಶಯಕ್ಕೆ ಧಕ್ಕೆ
ತರುವ ಕೆಲಸ ರಾಜಕೀಯ ಕಾರಣಕ್ಕೆ ಆಗುತ್ತಿರುವುದು ನೋವಿನ ವಿಷಯ. ಈ ಕುರಿತು ಎಲ್ಲ ವರ್ಗದ ಜನರ ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ತಲುಪಿಸುವ ಕಾರ್ಯವನ್ನು ಮಾಡಬೇಕಿದೆ ಎಂಬುದು ಎಲ್ಲ ಮಹನೀಯರ ಮೂಲ ಉದ್ದೇಶವಾಗಿದ್ದು, ಅವರ ಆಶಯ ಅನುಷ್ಠಾನಕ್ಕೆ ತರುವ ಹೊಣೆಗಾರಿಕೆ ಯುವ ಪೀಳಿಗೆ ಮೇಲಿದೆ ಎಂದರು.

 

 

 

ವಿದ್ಯಾರ್ಥಿ ದೆಸೆಯಿಂದಲೆ ಹೋರಾಟದಲ್ಲಿ ಸಕ್ರಿಯರಾಗಿದ್ದ ಬಾಬೂಜಿ 79 ವರ್ಷಗಳ ಕಾಲ ಎಲ್ಲ ನೋಂದ ಜನರ ಪ್ರಗತಿಗೆ ಧ್ವನಿಯಾಗಿ ಶ್ರಮಿಸಿದರು. 30 ವರ್ಷ ಸಚಿವರಾಗಿ ಸೇವೆ
ಸಲ್ಲಿಸಿದ ಅವರು ಭಾರತದ ಜನಸಂಖ್ಯೆಗೆ ಅನುಗುಣವಾಗಿ ಇಂದಿನ ಸಮರ್ಪಕ ಆಹಾರ ಪೂರೈಕೆಗೆ ಅವರು ರೂಪಿಸಿದ ಹಸಿರು ಕ್ರಾಂತಿಯೇ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.

ಆಹಾರ ಸಮಸ್ಯೆಗೆ ಭಾರತ ಸಿಲುಕಿದ್ದಾಗ ಕೃಷಿ ಕೇತ್ರದಲ್ಲಿ ಬಹದೊಡ್ಡ ಕ್ರಾಂತಿ ಮಾಡಿ ಆಹಾರ ಉತ್ಪಾದನೆಯಲ್ಲಿ ಅಪರಿಮಿತ ಸಾಧನೆಗೈದರು. ಇದರಿಂದ ಜನರ ಹಸಿವು ನೀಗಿಸಲು ಸಾಧ್ಯವಾಯಿತು. ಯಾವುದೇ ರಾಷ್ಟ್ರ ಅಭಿವೃದ್ಧಿ ಪಥದಲ್ಲಿಮುನ್ನಡೆಯಬೇಕಾದರೆ ಕೃಷಿ ಕ್ಷೇತ್ರದ ಪಾತ್ರ ಮಹತ್ತರವಾಗಿದೆ ಎಂದರು.

ಜಗಜೀವನರಾಂ ಅವರು ಗಾಂಧೀಜಿ ಅವರ ಪ್ರಭಾವಕ್ಕೆ ಒಳಗಾಗಿ ಸಾಮಾಜಿಕ ಬದಲಾವಣೆ ಕ್ರಾಂತಿಗೆ ಮುಂದಾದರು. ಕೃಷಿ, ರಕ್ಷಣಾ ಕ್ಷೇತ್ರಕ್ಕೆ ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅವರ ಚಿಂತನೆಗಳು ಜಗತ್ತಿಗೆ ಮಾದರಿಯಾಗಿವೆ. ಅವುಗಳನ್ನು ಯುವಜನರು ಹೆಚ್ಚು ಅಧ್ಯಯನ ಮಾಡುವ ಜತೆಗೆ ಪಾಲಿಸಬೇಕು ಎಂದು ಸಲಹೆ ನೀಡಿದರು.

1946ರಲ್ಲಿ ಜವಾಹರ್ ಲಾಲ್ ನೆಹರು ನೇತೃತ್ವದಲ್ಲಿ ಪ್ರಥಮ ಹಂಗಾಮಿ ಸರ್ಕಾರ ರಚನೆಯಾದಾಗ ಸಂಪುಟದ ಅತ್ಯಂತ ಕಿರಿಯ ಸಚಿವರಾಗಿ ಕಾರ್ಮಿಕ ಖಾತೆ ಬಾಬೂಜಿಗೆ
ನೀಡಲಾಗಿತ್ತು. ರಕ್ಷಣಾ ಮತ್ತು ಕೃಷಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದರು ಎಂದರು.
1952ರಲ್ಲಿ ನಡೆದ ಮೊದಲ ಚುನಾವಣೆಯಿಂದ 34 ವರ್ಷಗಳ ಕಾಲ ನಿರಂತರ ಸಂಸದರಾಗಿ ಆಯ್ಕೆಯಾಗಿ ಸೇವೆ ಮಾಡಿದರು. ಚುನಾವಣೆಯಲ್ಲಿ ಒಮ್ಮೆಯೂ ಸೋಲದ ದೇಶದ ಏಕೈಕ ರಾಜಕಾರಣಿ ಆಗಿದ್ದಾರೆ ಎಂದು ಬಣ್ಣಿಸಿದರು.

ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಆರ್.ಕೃಷ್ಣಮೂರ್ತಿ ಮಾತನಾಡಿ, ಯಾವುದೇ ವ್ಯಕ್ತಿಯನ್ನು ಜಾತಿಯ ನೆಲೆಗಟ್ಟಿನಲ್ಲಿ ನೋಡುವ ದೃಷ್ಟಿಕೋನ ಬದಲಾಬೇಕಿದೆ. ಬಸವಣ್ಣನ
ಸಮ ಸಮಾಜ ನಿರ್ಮಾಣಕ್ಕೆ, ಈ ಹಿಂದಿನ ಬಹುತೇಕ ರಾಜಕಾರಣಿಗಳು ಶ್ರಮಿಸಿದ್ದಾರೆ. ಅವರಲ್ಲಿ ಬಾಬೂಜಿ ಪ್ರಮುಖರು ಎಂದು ಹೇಳಿದರು.

ಭರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರಕಾಶ್ ಮಾತನಾಡಿ, ಬಾಬು ಜಗಜೀವನರಾಮ್ ದೇಶ ಕಂಡ ಅಪರೂಪದ ರಾಜಕಾರಣಿ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ
ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಪ್ರಕಾಶ್
ವಿಶ್ವನಾಥಹಳ್ಳಿ ಗ್ರಾಪಂ ಅಧ್ಯಕ್ಷ ತಿಮ್ಮಣ್ಣ,
ವಕೀಲರಾದ ಶರಣಪ್ಪ, ರವೀಂದ್ರ,
ಮುಖಂಡರಾದ ಕುಮಾರಸ್ವಾಮಿ
ರಂಗನಾಥ್, ಕೊಡಲಿ ಪ್ರಭಣ್ಣ, ಮಹೇಶ್,
ತಿಪ್ಪೇಶ್, ಶಿವನಕೆರೆ ಮೋಹನ್, ಪ್ರವೀಣ್,
ಮನೋಜ್, ಪುಟ್ಟರಾಜು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *