ಯಾರ್ಯಾರು ಪೋಸ್ಟಲ್ ಬ್ಯಾಲೆಟ್ ನಲ್ಲಿ ಚಲಾಯಿಸಬಹುದು ನೋಡಿ..

ಜಿಲ್ಲಾ ಸುದ್ದಿ

ಅಗತ್ಯ ಸೇವೆಯಲ್ಲಿರುವವರಿಗೆ ಪೋಸ್ಟಲ್ ಬ್ಯಾಲಟ್ ಮೂಲಕ ಮತದಾನಕ್ಕೆ ಅವಕಾಶ- ದಿವ್ಯಪ್ರಭು ಜಿ.ಆರ್.ಜೆ.

 

 

 

ಪ್ರಸಕ್ತ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗಿರುವ ವಿವಿಧ ಕ್ಷೇತ್ರಗಳ ಚಿತ್ರದುರ್ಗ ಜಿಲ್ಲೆಯ ಸಿಬ್ಬಂದಿಗಳು ಮತದಾನದಿಂದ ವಂಚಿತರಾಗದಂತೆ ಈ ಬಾರಿ ಚುನಾವಣಾ ಆಯೋಗ, ಇವರಿಗೆ ಪೋಸ್ಟಲ್ ಬ್ಯಾಲಟ್ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಹೇಳಿದರು.
ಪೋಸ್ಟಲ್ ಬ್ಯಾಲಟ್ ನಲ್ಲಿ ಮತದಾನ ಮಾಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾರೊಬ್ಬ ಅರ್ಹ ಮತದಾರನೂ ಕೂಡ ಮತದಾನದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಚುನಾವಣಾ ಆಯೋಗವು ಈ ಬಾರಿ ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾಗುವ ವಿದ್ಯುತ್ ಇಲಾಖೆ, ಬಿಎಸ್‍ಎನ್‍ಎಲ್, ರೈಲ್ವೆ, ದೂರದರ್ಶನ, ಆಕಾಶವಾಣಿ, ಆರೋಗ್ಯ ಇಲಾಖೆ, ವಿಮಾನಯಾನ, ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಗಳ ನೌಕರರು, ಅಗ್ನಿಶಾಮಕ ಸೇವೆ, ಮಾನ್ಯತೆ ಹೊಂದಿರುವ ಪತ್ರಕರ್ತರು, ಟ್ರಾಫಿಕ್ ಪೊಲೀಸ್ ಮತ್ತು ಆಂಬುಲೆನ್ಸ್ ಸೇವೆಯಲ್ಲಿರುವರು ಕರ್ತವ್ಯದ ಕಾರಣದಿಂದಾಗಿ ಮತದಾನದ ದಿನದಂದು ಮತ ಚಲಾಯಿಸಲು ಸಾಧ್ಯವಾಗದ ಸಂದರ್ಭ ಬರಬಹುದಾದ ನೌಕರರು, ಈ ಪೋಸ್ಟಲ್ ಬ್ಯಾಲಟ್ ಮೂಲಕ ಮತದಾನ ಮಾಡುವಂತಹ ಅವಕಾಶವನ್ನು ಬಳಸಬಹುದಾಗಿದೆ.
ಮೇಲೆ ತಿಳಿಸಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಪೋಸ್ಟಲ್ ಬ್ಯಾಲಟ್ ಸೇವೆ ಪಡೆಯಲು, ಅವರು ಕಡ್ಡಾಯವಾಗಿ ಚಿತ್ರದುರ್ಗ ಜಿಲ್ಲೆಯ ಯಾವುದಾದರೂ ಮತಗಟ್ಟೆಯಲ್ಲಿ ತಮ್ಮ ಮತ ಹೊಂದಿರಬೇಕು. ಬೇರೆ ಜಿಲ್ಲೆಯಲ್ಲಿ ಮತ ಹೊಂದಿರುವ ನೌಕರರಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ. ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಸಾಧ್ಯವಾಗದೇ ಇರುವಂತಹ ನೌಕರರು ಪೋಸ್ಟಲ್ ಬ್ಯಾಲಟ್ ಮೂಲಕ ಮತ ಚಲಾಯಿಸಲು, ಸಂಬಂಧಪಟ್ಟ ಇಲಾಖೆಯಿಂದ 12ಡಿ ನಮೂನೆಯನ್ನು ಪಡೆದು, ಸ್ವೀಕೃತಿ ನೀಡಬೇಕು. ಬಳಿಕ ಭರ್ತಿ ಮಾಡಿದ ನಮೂನೆಯನ್ನು ಸಂಬಂಧಪಟ್ಟ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. 12 ಡಿ ನಮೂನೆಯನ್ನು ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಒಮ್ಮೆ ಸಲ್ಲಿಸಿದ ಬಳಿಕ, ಅಂತಹವರು, ಪೋಸ್ಟಲ್ ಬ್ಯಾಲಟ್ ಮೂಲಕವೇ ಮತದಾನ ಮಾಡಬೇಕು, ಮತದಾನ ದಿನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಈ ವಿಧಾನವು ಕೇವಲ ಆಯಾ ಸಿಬ್ಬಂದಿಗೆ ಐಚ್ಛಿಕವಾಗಿದ್ದು, ಕಡ್ಡಾಯವಲ್ಲ. ಆದಾಗ್ಯೂ ಅವಕಾಶ ಲಭ್ಯವಿದ್ದಲ್ಲಿ ಮತಗಟ್ಟೆಗೆ ತೆರಳಿ ಚುನಾವಣೆಯ ಹಬ್ಬದಲ್ಲಿ ಪಾಲ್ಗೊಂಡು ಮತದಾನ ಮಾಡುವಂತಹ ಅನುಭವವನ್ನು ಹೊಂದುವುದು ಮೊದಲ ಆಯ್ಕೆಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಹೇಳಿದರು.
ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಅಧೀನದಲ್ಲಿ ಬರುವಂತಹ ಅಗತ್ಯ ಸೇವೆಗಳ ಸಿಬ್ಬಂದಿಗಳ ವಿವರವನ್ನು ಕೂಡಲೆ ಸಲ್ಲಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಪೋಸ್ಟಲ್ ಬ್ಯಾಲಟ್ ನೋಡಲ್ ಅಧಿಕಾರಿಯಾದ ತೋಟಗಾರಿಕೆ ಉಪನಿರ್ದೇಶಕಿ ಸವಿತಾ, ಡಿಹೆಚ್‍ಒ ಡಾ. ರಂಗನಾಥ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *