ಕಾಂಗ್ರೆಸ್ ಪಕ್ಷವನ್ನು ಒಂದು‌ ಕ್ಷಣವು ಅಧಿಕಾರದಲ್ಲಿರಲು ಬಿಡುವುದಿಲ್ಲ

ರಾಜ್ಯ

ಐದು ಗ್ಯಾರಂಟಿ ಕಾರ್ಡ್‍ಗಳನ್ನು ಕೊಟ್ಟು ರಾಜ್ಯದ ಜನರಿಗೆ ಟೋಪಿ ಹಾಕಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಭರವಸೆಗಳನ್ನು ಈಡೇರಿಸಲು ಇಲ್ಲಸಲ್ಲದ ಷರತ್ತುಗಳನ್ನು ಹಾಕುತ್ತಿದೆ. ಕೊಟ್ಟ ಮಾತಿನಂತೆ ನಡೆಯದಿದ್ದರೆ ಒಂದು ಕ್ಷಣವೂ ಅಧಿಕಾರಲ್ಲಿರಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದರು.
ತುರುವನೂರು ರಸ್ತೆಯಲ್ಲಿರುವ ರೆಡ್ಡಿ ಸಮುದಾಯ ಭವನದಲ್ಲಿ ಗುರುವಾರ ನಡೆದ ಬಿಜೆಪಿ. ಸಂಘಟನಾತ್ಮಕ ಸಭೆ ಉದ್ಘಾಟಿಸಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪನವರು ವಿಧಾನಸಭೆ ಚುನಾವಣಾ ಪೂರ್ವದಲ್ಲಿಯೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇವರುಗಳು ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಪ್ರತಿ ತಿಂಗಳು ರಾಜ್ಯದ ಬಡವರಿಗೆ ಹತ್ತು ಕೆ.ಜಿ. ಹಾಗೂ ಕೇಂದ್ರದ ಐದು ಕೆ.ಜಿ.ಅಕ್ಕಿ ಸೇರಿ ಒಟ್ಟು ಹದಿನೈದು ಕೆ.ಜಿ.ಯನ್ನು ನೀಡಬೇಕು. ಒಂದು ಕೆ.ಜಿ.ಅಕ್ಕಿ ಕಡಿಮೆಯಾದರೂ ಸುಮ್ಮನಿರಲ್ಲ. ಕಾಂಗ್ರೆಸ್‍ನ ಗ್ಯಾರಂಟಿಗಳನ್ನು ನಂಬಿ ನಮ್ಮವರು ಕೆಲವರು ಓಟು ಹಾಕಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಈಗ ನುಡಿದಂತೆ ನಡೆದುಕೊಳ್ಳದಿದ್ದರೆ ವಿಧಾನಸಭೆ ಅಧಿವೇಶನ ಆರಂಭದ ದಿನದಿಂದ ಹತ್ತು ದಿನಗಳ ಕಾಲ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ನಮ್ಮೆಲ್ಲಾ ಮಾಜಿ ಶಾಸಕರುಗಳನ್ನು ಸೇರಿಸಿಕೊಂಡು ಬೆಳಗಿನಿಂದ ಸಂಜೆಯತನಕ ಧರಣಿ ನಡೆಸುತ್ತೇನೆಂದು ಹೇಳಿದರು.
ವಿಧಾನಸಭೆ ಚುನಾವಣೆ ಸೋಲಿನಿಂದ ನಮ್ಮ ಕಾರ್ಯಕರ್ತರು ದೃತಿಗೆಟ್ಟಿಲ್ಲ. ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ. ಒಂದು ಕಾಲದಲ್ಲಿ ನಮ್ಮ ಪಕ್ಷ ಅಧಿಕಾರವನ್ನೇ ಕಾಣದ ಸಂದರ್ಭದಲ್ಲಿ ಸದನದ ಒಳಗೆ ಹೊರಗೆ ಹೋರಾಟ ನಡೆಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಬಿಟ್ಟರೆ ಅನ್ಯ ಮಾರ್ಗವಿಲ್ಲ. ಜನರಿಗೆ ಮೋಸ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಬಂಡವಾಳವನ್ನು ಬಯಲು ಮಾಡಲಾಗುವುದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಕಾರ್ಯಕರ್ತರನ್ನು ಕೋರಿದರು.
ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಉಚಿತ ಕರೆಂಟ್ ನೀಡಿದೆ. ಬಡವರ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದೆ. ಆದರೆ ಯಾವುದನ್ನು ಚುನಾವಣೆ ಪ್ರಚಾರಕ್ಕಾಗಿ ಬಳಸಿಕೊಳ್ಳಲಿಲ್ಲ. ಇಡಿ ವಿಶ್ವವೆ ನಮ್ಮ ದೇಶದ ಪ್ರಧಾನಿ ಮೋದಿ ಕಡೆ ನೋಡುತ್ತಿದೆ. ಅದಕ್ಕಾಗಿ ಮುಂದಿನ ವರ್ಷ ನಡೆಯಲಿರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ.ಯನ್ನು ಗೆಲ್ಲಿಸಿ. ಮೂರನೆ ಬಾರಿಗೆ ಮೋದಿ ಮತ್ತೆ ಪ್ರಧಾನಿಯಾದರೆ ದೇಶದ ಚಿತ್ರಣವೇ ಬದಲಾಗಲಿದೆ ಎಂದು ನುಡಿದರು.
ಬಿಜೆಪಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಸೋತು ನಂತರ ಅಧಿಕಾರಕ್ಕೆ ಬರುವುದು ಸಹಜ. ಅದೇ ರೀತಿ ರಾಜ್ಯದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತಿದೆ. ಕಾಂಗ್ರೆಸ್‍ನವರು ಸೋತೆ ಇಲ್ಲೇನೋ ಎನ್ನುವಂತೆ ಗೆದ್ದು ಬೀಗುತ್ತಿದ್ದಾರೆ. ಕತ್ತಲಾದ ಮೇಲೆ ಬೆಳಕು ಬಂದೆ ಬರುತ್ತದೆ. ಮುಂದೆ ರಾಜ್ಯದಲ್ಲಿ ಮತ್ತೆ ಬಿಜೆಪಿ.ಯನ್ನು ಅಧಿಕಾರಕ್ಕೆ ತರೋಣ. ಕಾರ್ಯಕರ್ತರು ಎದೆಗುಂದುವುದು ಬೇಡ ಎಂದು ಧೈರ್ಯ ಹೇಳಿದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿಯೆ ರಾಜ್ಯದ ಜನರಿಗೆ ನೀಡಿದ್ದ ಐದು ಗ್ಯಾರೆಂಟಿಗಳನ್ನು ಈಡೇರಿಸದಿದ್ದರೆ ವಿಧಾನಸೌಧದ ಎದುರು ಗಾಂಧಿ ಪ್ರತಿಮೆ ಬಳಿ ಬಿ.ಎಸ್.ಯಡಿಯೂರಪ್ಪನವರ ಮುಂದಾಳತ್ವದಲ್ಲಿ ಧರಣಿ ನಡೆಸುತ್ತೇವೆ. ಮೋದಿ ದೇಶದ ಪ್ರಧಾನಿಯಾಗಿ ಒಂಬತ್ತು ವರ್ಷಗಳಾಗಿದೆ. ಕೋವಿಡ್‍ನಂತ ಕಷ್ಟದ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಿ ಎಲ್ಲರ ಪ್ರಾಣ ಕಾಪಾಡಿದ್ದಾರೆ. ಭಾರತ ಬೇರೆ ದೇಶಕ್ಕೆ ಸಾಲ ಕೊಡುವಷ್ಠು ಆರ್ಥಿಕವಾಗಿ ಬಲಶಾಲಿಯಾಗಿದೆ ಎಂದರೆ ಅದಕ್ಕೆ ಪ್ರಧಾನಿ ಮೋದಿ ಕಾರಣ. ವಿಶ್ವಕ್ಕೆ ಯೋಗದ ಮಹತ್ವ ಸಾರಿದ್ದಾರೆ. ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಬೇಕಿದೆ. ಕೇಂದ್ರದ ಸಾಧನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡುತ್ತ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಈಗ ಪ್ರತಿ ಬಡವರಿಗೆ ಹತ್ತು ಕೆ.ಜಿ.ಅಕ್ಕಿ ಕೊಡಲು ರಾಗ ಎಳೆಯುತ್ತ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಹತ್ತು ಕೆ.ಜಿ.ಅಕ್ಕಿ ಕೊಡುವುದು ರಾಜ್ಯದ ಜವಾಬ್ದಾರಿ. ಕೊರೋನಾದಲ್ಲಿ ಪ್ರಧಾನಿ ಮೋದಿ ದೇಶದ ಎಂಬತ್ತು ಕೋಟಿ ಜನರಿಗೆ ಉಚಿತ ಅಕ್ಕಿ ಕೊಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತದೆ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅತ್ಯುತ್ತಮ ಆಡಳಿತ ನಡೆಸಿದರು. ಕಾಂಗ್ರೆಸ್ ಐದು ಗ್ಯಾರೆಂಟಿಗಳನ್ನು ಕೊಡುವತನಕ ಹೋರಾಟ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ ಚುನಾವಣೆಯಲ್ಲಿ ಸೋತೆವೆಂದು ಕಾರ್ಯಕರ್ತರು ಎದೆಗುಂದಬಾರದು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಧೈರ್ಯ ತುಂಬುವುದಕ್ಕಾಗಿ ರಾಜ್ಯದಲ್ಲಿ ಏಳು ತಂಡಗಳು ಪ್ರವಾಸ ಮಾಡುತ್ತಿವೆ. ಕಾಂಗ್ರೆಸ್‍ನ ಐದು ಗ್ಯಾರೆಂಟಿಗಳನ್ನು ನಂಬಿ ಜನ ಮೋಸ ಹೋದರು. ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ಗಾಂಧಿ ಪ್ರತಿಮೆ ಎದುರು ಚಳುವಳಿ ನಡೆಸಲಾಗುವುದೆಂದರು.
ಸೋನಿಯಾಗಾಂಧಿ, ರಾಹುಲ್, ಪ್ರಿಯಾಂಕಗಾಂಧಿಗೆ ಆಡಳಿತ ಗೊತ್ತಿಲ್ಲ. ಹಣಕಾಸಿನ ವ್ಯವಹಾರ ಮೊದಲೆ ಬರಲ್ಲ. ಜು. ನಾಲ್ಕನೆ ತಾರೀಖಿನೊಳಗೆ ಗ್ಯಾರೆಂಟಿಗಳನ್ನು ರಾಜ್ಯದ ಜನರಿಗೆ ಮುಟ್ಟಿಸದಿದ್ದರೆ ಮೋಸದಾಟವನ್ನು ಬಯಲು ಮಾಡಲು ಧರಣಿ ನಡೆಸಲಾಗುವುದೆಂದು ಹೇಳಿದರು.
ಮಾಜಿ ಸಚಿವ ಬಿ.ಸಿ.ನಾಗೇಶ್ ಮಾತನಾಡುತ್ತ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾದ ಕೂಡಲೆ ಪಠ್ಯಪುಸ್ತಕದಲ್ಲಿನ ಕೆಲವು ವಿಚಾರಗಳನ್ನು ಬದಲಾವಣೆ ಮಾಡಲು ಒಪ್ಪಿಗೆ ನೀಡಿದ್ದಾರೆ. ನಮ್ಮ ಪಕ್ಷ ಅಧಿಕಾರಲ್ಲಿದ್ದಾಗ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದಿದ್ದನ್ನು ರದ್ದುಪಡಿಸಲು ಹೊರಟಿದೆ. ಇದರಿಂದ ಸಮಾಜದ ಸಂಸ್ಕøತಿ ಹಾಳಾಗಲಿದೆ. ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದೆ. ಗ್ಯಾರೆಂಟಿಗಳನ್ನು ಕೊಡುವತನಕ ಸುಮ್ಮನೆ ಕೂರಲ್ಲ ಎಂದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ ಮೋದಿ ಭಾರತದ ಪ್ರಧಾನಿಯಾದ ಮೇಲೆ ಇಡಿ ವಿಶ್ವದ ಗಮನ ಸೆಳೆದಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸಾಧನೆ ಸಂಭ್ರಮವಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಮೋದಿರವರು ಮಾಡುತ್ತಿರುವ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ನೆನಪಿಸಿದರು

 

 

 

Leave a Reply

Your email address will not be published. Required fields are marked *