ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಯಾಗಲಿ

ಜಿಲ್ಲಾ ಸುದ್ದಿ

ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ವರದಿ ಯಥಾವತ್ ಜಾರಿಯಾಗಲಿ : ಹಿರಿಯೂರು :ಜು24,ಹಿರಿಯೂರು ತಾಲ್ಲೋಕಿನ ಹೊಸಕಾತ್ರಿಕೇನಹಳ್ಳಿ ಗ್ರಾಮದಲ್ಲಿ ಕುಂಚಿಟಿಗರ ಕೇಂದ್ರ ಓಬಿಸಿ ಮೀಸಲಾತಿ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ “ಕುಂಚಿಟಗ ಕುಲಶಾಸ್ತ್ರ ಅಧ್ಯಯನ ವರದಿ”ಯನ್ನು ಯಥಾವತ್ತಾಗಿ ಜಾರಿ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಆಗ್ರಹ ಪೂರ್ವಕ ಒತ್ತಾಯ ಮಾಡಿದರು. ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಪ್ರವರ್ಗ 3 ಎ ನಲ್ಲಿ ಬರುವ ಇತರೆ ಎಲ್ಲಾ ಜಾತಿಗಳಿಗೆ ಕೇಂದ್ರ ಓಬಿಸಿ ಮೀಸಲಾತಿ ಕೊಟ್ಟು ಕುಂಚಿಟಿಗರನ್ನು ಮಾತ್ರ ಕೈ ಬಿಡುವ ಮೂಲಕ ಅತಿ ಹೆಚ್ಚು ಸರ್ಕಾರಿ ನೌಕರಿ ಇರುವ ರೈಲ್ವೆ, ಅಂಚೆ, ಬ್ಯಾಂಕಿಂಗ್,ಮಿಲಿಟರಿ, ಯುಪಿಎಸ್ಸಿ ನೇಮಕಾತಿಗಳಾದ ಐಎಎಸ್, ಐಪಿಎಸ್, ಐಆರ್ ಎಸ್, ಐಎಫ್ ಎಸ್ ನಂತಹ ಉನ್ನತ ಹುದ್ದಗಳು ಕೈ ತಪ್ಪಿ ಹೋಗಿವೆ. ನವೋದಯ ಶಾಲೆಯಲ್ಲಿ ಸಿಗುವ ವಸತಿ ಸಹಿತ ಉಚಿತ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

 

 

 

ಕರ್ನಾಟಕ ರಾಜ್ಯದ 17 ಜಿಲ್ಲೆಗಳಲ್ಲಿ 15 ಲಕ್ಷಕ್ಕೂ ಅಧಿಕ ಕುಂಚಿಟಿಗರು ಇದ್ದೇವೆ.ಕುಂಚಿಟಿಗರ ಹೆಸರಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷದ ರಾಜಕೀಯ ನಾಯಕರು ಚುನಾವಣೆ ಬಂದಾಗ ಮಾತ್ರ ಓಬಿಸಿ ಮೀಸಲಾತಿ ಜಪ ಮಾಡಿ,ಗದ್ದುಗೆ ಏರಿದ ಮೇಲೆ ಜಾಣ ಮೌನ ತಾಳಿರುತ್ತಾರೆ.ಕುಂಚಿಟಿಗ ಸಮಾಜಕ್ಕೆ ಗುರಿ ತೋರುವ ಗುರುಗಳಲ್ಲೇ ಬಿನ್ನಾಭಿಪ್ರಾಯ ಉಂಟಾಗಿ ಅಧಿಕ ಸಂಖ್ಯೆಯಲ್ಲಿರುವ ಕುಂಚಿಟಿಗರು ಕುಂಚಿಟಿಗ ಒಕ್ಕಲಿಗ ಮತ್ತು ವೀರಶೈವ ಕುಂಚಿಟಿಗ ಅಂತ ಎರಡು ಭಾಗ ಆಗಿದ್ಧೇವೆ. ಒಗ್ಗಟ್ಟಿನ ಕೊರತೆಯಿಂದಾಗಿ ಕುಂಚಿಟಿಗರಿಗೆ ಶೈಕ್ಷಣಿಕ,ಔದ್ಯೋಗಿಕ,ಸಾಮಾಜಿಕ,ಆರ್ಥಿಕ ಹಿನ್ನಡೆಯಾಗಿ ಅತಂತ್ರ ಸ್ಥಿತಿ ತಲುಪಿದ್ಧೇವೆ ಎಂದು ತಿಳಿಸಿದರು.ಇತ್ತೀಚೆಗೆ ಬಾಂಬೆ ಹೈ ಕೋರ್ಟು ಪಿತೃ ಸಂಬಂಧಿ ಜಾತಿಯು ವ್ಯಕ್ತಿಯ ಸಾಮಾಜಿಕ ಸ್ಥಾನಮಾನಕ್ಕೆ ಪ್ರಮುಖ ಪುರಾವೆಯಾಗುತ್ತದೆ ಎಂದು ಮಹತ್ವದ ತೀರ್ಪು ನೀಡಿದೆ.ಆ ಪ್ರಕಾರವಾಗಿ ಓ ಬಿ ಸಿ ಮೀಸಲಾತಿ ಆಸೆಗಾಗಿ ಅನ್ಯ ಜಾತಿಗಳತ್ತ ಮುಖ ಮಾಡಿದವರಿಗೆ ಕಾನೂನಾತ್ಮಕ ಸಮಸ್ಯೆ ಉಂಟಾಗುತ್ತದೆ.ಆದ್ದರಿಂದ ಯಾರು ಕೂಡ ಜಾತಿ ಬದಲಾವಣೆ ಮಾಡಬಾರದು,ತಂದೆಯ ಜಾತಿ ಮಕ್ಕಳಿಗೆ ಬರುತ್ತದೆ ಎಂದು ತಿಳಿಸಿದರು. ಕುಂಚಿಟಿಗರ ಹಿತಚಿಂತಕ ಎಸ್. ವಿ. ರಂಗನಾಥ್ ಓ ಬಿ ಸಿ ಮೀಸಲಾತಿ ಕಮಿಟಿ ಸಂಚಾಲಕ ವಿ ಕುಭೇರಪ್ಪ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಹುಲುಗಲ ಕುಂಟೆ ಗ್ರಾ ಪ ಉಪಾಧ್ಯಕ್ಷ ಶ್ರೀನಿವಾಸ್, ಶಶಿಕಲಾ, ನಿಜಲಿಂಗಪ್ಪ,ತಿಮ್ಮಣ್ಣ,ಗಂಗಮ್ಮ ಮುಂತಾದವರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

Leave a Reply

Your email address will not be published. Required fields are marked *