ಹಿರಿಯರ ಕ್ಷೇಮಾಭಿವೃದ್ಧಿಗೆ ನಾವೆಲ್ಲಾ ಕೈ ಜೋಡಿಸೋಣ

ಜಿಲ್ಲಾ ಸುದ್ದಿ

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
ಹಿರಿಯರ ಕ್ಷೇಮಾಭಿವೃದ್ಧಿಗೆ ನಾವೆಲ್ಲಾ ಕೈ ಜೋಡಿಸೋಣ

 

 

 

ಹಿರಿಯ ನಾಗರಿಕರನ್ನು ನಾವು ಗೌರವಯುತವಾಗಿ ನಡೆಸಿಕೊಂಡು ಅವರ ಆರೋಗ್ಯದ ಜತೆಗೆ ಬೇಕು, ಬೇಡಗಳನ್ನು ವಿಚಾರಿಸುವ ಮೂಲಕ ಪ್ರತಿನಿತ್ಯ ಹಿರಿಯರ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ನಾವೆಲ್ಲರೂ ಹಿರಿಯರ ಕ್ಷೇಮಾಭಿವೃದ್ಧಿಗೆ ಕೈ ಜೋಡಿಸೋಣ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ  ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಳಿ ವಯಸ್ಸಿನಲ್ಲೂ ಕೂಡ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಿರಿಯ ನಾಗರಿಕರು ಯಾರಿಗಿಂತ ಕಮ್ಮಿಲ್ಲ ಹಾಗೂ ಯುವ ಸಮುದಾಯಕ್ಕೆ ಮಾದರಿಯಾಗಿದ್ದೀರಾ. ಸರ್ಕಾರದ ಯೋಜನೆಗಳನ್ನು ಹಿರಿಯ ನಾಗರಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಹಿರಿಯ ನಾಗರಿಕರಿಗೆ ಸಮಸ್ಯೆ ಎದುರಾದಾಗ ಎಸಿ ಕೋರ್ಟ್‍ಗೆ ದಾವೆ ಹಾಕುವುದರ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದರು.
ಈಗಿನವರಿಗೆ ಚಿಕ್ಕ ಚಿಕ್ಕ ವಯಸ್ಸಿನಲ್ಲೇ ನೂರೆಂಟು ಖಾಯಿಲೆಗಳಿರುತ್ತವೆ. ನೀವು ನೂರು ವರ್ಷಗಳು ದಾಟಿದರೂ ಸಾಕಷ್ಟು ಗಟ್ಟಿಮುಟ್ಟಾಗಿದ್ದೀರಾ. ಮುಂದೆ ನಮಗೂ ಕೂಡ ವಯಸ್ಸಾಗುತ್ತದೆ. ಹಾಗಾಗಿ ನಮ್ಮ ಮನೆಯ ಹಿರಿಯರು, ನಮ್ಮ ಅಕ್ಕಪಕ್ಕದ ಮನೆಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿ ದೇವಿ ಮಾತನಾಡಿ,  ಹಿರಿಯ ನಾಗರಿಕರ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.. ಹಿರಿಯ ನಾಗರಿಕರ ರಕ್ಷಣೆಗಾಗಿ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಅಧಿಕಾರಿಗಳಿದ್ದಾರೆ. ಯಾವುದೇ ಸಮಸ್ಯೆಗಳಿದ್ದರೂ ಅವರ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಜಿಲ್ಲೆಯಲ್ಲಿ 2011ರ ಜನಗಣತಿಯ ಪ್ರಕಾರ 16.59 ಲಕ್ಷ ಜನಸಂಖ್ಯೆ ಇದ್ದು, ಅದರಲ್ಲಿ ಶೇಕಡ 7.72ರಷ್ಟು ಅಂದರೆ ಒಟ್ಟು 1.28 ಲಕ್ಷ ಜನ ಹಿರಿಯ ನಾಗರಿಕರು ಇದ್ದಾರೆ. ಹಿರಿಯ ನಾಗರಿಕರು ಆರೋಗ್ಯವಂತರಾಗಿ ಗೌರವಯುತವಾಗಿ ಸಮಾಜದಲ್ಲಿ ಬದುಕಬೇಕು ಎಂದರು.
ಹಿರಿಯ ನಾಗರಿಕರು ಒಂಟಿತನ, ಮಾನಸಿಕ ತುಮಲ, ಆರ್ಥಿಕ ಮುಗ್ಗಟ್ಟು , ಅನಾರೋಗ್ಯ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಿ ಸಂಧ್ಯಾ ಕಾಲದಲ್ಲಿ ನೆಮ್ಮದಿಯ ಬದುಕು ಸಾಗಿಸುವಂತೆ ಮಾಡುವುದು ಸಮಾಜ ಹಾಗೂ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಹಿರಿಯ ನಾಗರಿಕರಿಗೆ ಗುಣಮಟ್ಟದ ಜೀವನ ಒದಗಿಸಲು ಕೇಂದ್ರ ಸರ್ಕಾರ ಹಿರಿಯ ನಾಗರಿಕರ ರಾಷ್ಟ್ರ ನೀತಿಯನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಅನುದಾನದಡಿ ಚಿತ್ರದುರ್ಗ ನಗರದ ಕುರುವಿನ ಕಟ್ಟೆ ಸರ್ಕಲ್ ಬಳಿ ಶ್ರೀ ಸದ್ಗುರು ಕಬೀರಂದ ವೃದ್ಧಾಶ್ರಮ, ಹೊಸದುರ್ಗ ತಾಲೂಕಿನ ಕೋಟೆ ರಸ್ತೆಯಲ್ಲಿರುವ ಶ್ರೀ ರಾಜ ಯೋಗಿ ಸಿದ್ದಾರ್ಥ ವೃದ್ಧಾಶ್ರಮ ಸ್ಥಾಪನೆ ಮಾಡಿ ಪ್ರತಿ ಕೇಂದ್ರದಲ್ಲಿ 25 ಜನ ಹಿರಿಯ ನಾಗರಿಕರಿಗೆ ಊಟ ವಸತಿ ಹಾಗೂ ಔಷಧೋಪಚಾರಗಳನ್ನು ಮಾಡಲಾಗುತ್ತಿದೆ ಎಂದರು.
ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ ಪೋಷಣೆ ಮತ್ತು ಕಲ್ಯಾಣ ಅಧಿನಿಯಮ 2007ರ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. 2007ರ ಕಾಯ್ದೆಯ ಪ್ರಕಾರ ಉಪವಿಭಾಗ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ವಹಣಾ ನ್ಯಾಯ ಮಂಡಳಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ 2022-23ನೇ ಸಾಲಿನಲ್ಲಿ 26 ದೂರುಗಳ ಅರ್ಜಿ ಸ್ವೀಕೃತವಾಗಿದ್ದು, ಅದರಲ್ಲಿ 14 ಅರ್ಜಿಗಳು ವಿಲೇವಾರಿಯಾಗಿದ್ದು 12 ಅರ್ಜಿಗಳು ವಿಚಾರಣೆ ಹಂತದಲ್ಲಿದೆ ಎಂದು ತಿಳಿಸಿದರು.
ಶತಾಯಿಷಿ ಮತದಾರನಿಗೆ ಅಭಿನಂದನೆ:  ಅಕ್ಟೋಬರ್ 1 ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನ ಶತಾಯಿಷಿ ಮತದಾರನಿಗೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಹಿರಿಯ ನಾಗರಿಕರು ಅನೇಕ ಚುನಾವಣೆಗಳಲ್ಲಿ ಮತದಾನ ಮಾಡಿದ್ದಾರೆ. ಅವರ ದೂರದೃಷ್ಠಿ, ಮಾರ್ಗದರ್ಶನ ಮತ್ತು ಬೆಂಬಲ ಶ್ಲಾಘನೀಯವಾಗಿದೆ. ಈ ಹಿನ್ನಲೆಯಲ್ಲಿ ನೂರು ವರ್ಷ ಪೂರೈಸಿದ ಜಿ.ಆರ್.ಹಳ್ಳಿಯ ಅಡಿವೆಪ್ಪ, ತಿರುಮಲಾಪುರದ ಶಾಂತಮ್ಮ, ಸೊಂಡೆ ಕೊಳದ ಸುಶೀಲಮ್ಮ, ಬಸಮ್ಮ, ಕುರುವಿನ ಕಟ್ಟೆ ಸರ್ಕಲ್‍ನ ಕೊಲ್ಲಮ್ಮ, ಆಜಾದ್ ನಗರದ ರೆಹಮಾನ್ ಸಾಬ್ ಹಾಗೂ ಕಲೆ, ಸಾಹಿತ್ಯ, ವೈದ್ಯಕೀಯ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಜಿಲ್ಲೆಯ ಹಿರಿಯ ನಾಗರೀಕರಿಗೆ ಸನ್ಮಾನಿಸಲಾಯಿತು.
ಕ್ರೀಡಾ ಮತ್ತು ಸಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಪ್ರಶಸ್ತಿ: ಡಿ ಸತ್ಯನಾರಾಯಣ 200 ಮೀಟರ್ ನಡಿಗೆಯಲ್ಲಿ ಪ್ರಥಮ, ಮಹಿಳಾ ವಿಭಾಗದಲ್ಲಿ ಟಿ.ಕಮಲಮ್ಮ 200 ಮೀಟರ್ ಪ್ರಥಮ, ಸುರೇಗೌಡ ಏಕಪಾತ್ರಾ ಅಭಿನಯ ಪ್ರಥಮ ಹೀಗೆ ಕ್ರೀಡಾ ವಿಭಾಗದಲ್ಲಿ 51 ಹಾಗೂ ಸಾಂಸ್ಕøತಿಕ ವಿಭಾಗದಲ್ಲಿ 88 ಪ್ರಶಸ್ತಿಗಳನ್ನು ಹಿರಿಯ ನಾಗರಿಕರಿಗೆ ನೀಡಲಾಯಿತು.
ವಿಶ್ರಾಂತ ಉಪನ್ಯಾಸಕಿ ಸಿ.ಬಿ.ಶೈಲಾ ಜಯಕುಮಾರ್ ಹಿರಿಯ ಮಹಿಳೆಯರ ಪುಟಿದೆಳುವ ಸಾಮಥ್ರ್ಯ ಮತ್ತು ಅನನ್ಯ ಕೊಡುಗೆಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಆರ್.ಬಣಕಾರ್, ನಗರಸಭೆ ಉಪಾಧ್ಯಕ್ಷೆ ಮಂಜುಳಾ, ಸಿಡಿಪಿಓ ಸುಧಾ, ಹಿರಿಯ ನಾಗರೀಕರ ಜಿಲ್ಲಾ ಸಂಘದ ಅಧ್ಯಕ್ಷ ರಂಗಪ್ಪ ರೆಡ್ಡಿ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವೈ.ಚಂದ್ರಶೇಖರಯ್ಯ, ಇಲಾಖೆಯ ಸಿಬ್ಬಂದಿ ವರ್ಗದವರು ಹಾಗೂ ಹಿರಿಯನಾಗರಿಕರು ಇದ್ದರು.

Leave a Reply

Your email address will not be published. Required fields are marked *