ಬಾಲಕಾರ್ಮಿಕ ಪದ್ಧತಿ ತಡೆ, ನಿರ್ಮೂಲನೆಗಾಗಿ ಹೆಚ್ಚಿನ ದಾಳಿ ನಡೆಸಿ, ಅರಿವು ಮೂಡಿಸಿ

ಜಿಲ್ಲಾ ಸುದ್ದಿ

ಬಾಲಕಾರ್ಮಿಕ ಪದ್ಧತಿ ತಡೆ, ನಿರ್ಮೂಲನೆಗಾಗಿ ಹೆಚ್ಚಿನ ದಾಳಿ ನಡೆಸಿ, ಅರಿವು ಮೂಡಿಸಿ

 

 

 

ಬಾಲಕಾರ್ಮಿಕ ಪದ್ಧತಿ ತಡೆ ಹಾಗೂ ನಿರ್ಮೂಲನೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ದಾಳಿ ನಡೆಸಿ, ಪ್ರಕರಣ ದಾಖಲಿಸಿ ದಂಡ ವಿಧಿಸಬೇಕು. ಜೊತೆಗೆ ಅರಿವು ಹಾಗೂ ಜನಜಾಗೃತಿಯನ್ನೂ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರನ್ನು ಪತ್ತೆ ಹಚ್ಚಲು ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ದಿಢೀರ್ ಭೇಟಿ ನೀಡಿ, ತಪಾಸಣೆ ನಡೆಸಬೇಕು. ವಿಶೇಷವಾಗಿ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಹೆಚ್ಚು ಹೆಚ್ಚು ತಪಾಸಣೆ ಕಾರ್ಯಕೈಗೊಳ್ಳಬೇಕು. ಇದರ ಜೊತೆಗೆ ಜಿಲ್ಲೆಯಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಅರಿವು ಹಾಗೂ ಜನಜಾಗೃತಿಯನ್ನೂ ಮೂಡಿಸಬೇಕು ಎಂದು ತಾಕೀತು ಮಾಡಿದರು.
ಪ್ರತಿ ಮಾಹೆಯಲ್ಲಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕರನ್ನು ಪತ್ತೆ ಹಚ್ಚಿ ತಪಾಸಣೆ ಮಾಡಿದ ವರದಿಯನ್ನು ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯು ಕಾಲಕಾಲಕ್ಕೆ ಜಿಲ್ಲಾಮಟ್ಟದ ಸಮಿತಿಗೆ ಸಭೆಯ ವರದಿ ಸಲ್ಲಿಸಬೇಕು. ತಾಲ್ಲೂಕು ಮಟ್ಟದ ಸಮಿತಿ ಸಭೆ ನಡೆಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಾಲಕಾರ್ಮಿಕ ಪದ್ಧತಿ ತಡೆಗಟ್ಟಲು ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ಎನ್.ಯಶೋಧರ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಸಭೆ ಆಯೋಜಿಸಲಾಗುತ್ತಿದೆ. ಸಮಿತಿಯಲ್ಲಿ 12 ಮಂದಿ ಸಮಿತಿ ಸದಸ್ಯರಿದ್ದಾರೆ. ಪ್ರತಿಯೊಂದು ತಾಲ್ಲೂಕಿನಲ್ಲಿಯೂ ತಾಲ್ಲೂಕು ಟಾಸ್ಕ್ ಪೋರ್ಸ್ ಸಮಿತಿ ಕಾರ್ಯನಿರ್ವಹಿಸಲಿದ್ದು, ತಹಶೀಲ್ದಾರ್ ತಾಲ್ಲೂಕು ಸಮಿತಿಯ ಅಧ್ಯಕ್ಷತೆರಾಗಿದ್ದು, ಕಾರ್ಮಿಕ ನಿರೀಕ್ಷಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಂಬಂಧಪಟ್ಟಂತೆ ದಾಳಿ ನಡೆಸಿ, ವರದಿಯನ್ನು ಜಿಲ್ಲಾ ಸಮಿತಿಗೆ ಕಳಿಸುತ್ತಾರೆ. ಕಳೆದ ಒಂದು ವರ್ಷದಿಂದ ಸಮರ್ಪಕವಾಗಿ ದಾಳಿ ನಡೆಯುತ್ತಿಲ್ಲ ಎಂದು ಹೇಳಿದರು.
ಜಿಲ್ಲೆಯಾದ್ಯಂತ 1986ರ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣದಡಿ ಕಾರ್ಮಿಕರು ನಿರೀಕ್ಷಕರು ತಪಾಸಣೆ ನಡೆಸುತ್ತಿದ್ದು, 2022ರ ಏಪ್ರಿಲ್ 01 ರಿಂದ ಇಲ್ಲಿಯವರೆಗೆ 227 ತಪಾಸಣೆ ಮಾಡಲಾಗಿದೆ. ಇದರಲ್ಲಿ  ಮೂವರು ಬಾಲ ಕಾರ್ಮಿಕರನ್ನು ಪತ್ತೆ ಮಾಡಲಾಗಿದ್ದು, ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್‍ಐಆರ್ ಮಾಡಲಾಗಿದೆ. ಎರಡು ಪ್ರಕರಣಗಳು 18 ವರ್ಷ ಮೇಲ್ಪಟ್ಟಿರುವುದರಿಂದ ಮುಖ್ಯವಾಹಿನಿಗೆ ತರಲಾಗಿದೆ ಎಂದರು.
ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್ ಮಾತನಾಡಿ, ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯು ಪ್ರತಿ ಮಾಹೆಯು ದಾಳಿ ಮಾಡಿ ವರದಿ ಸಲ್ಲಿಸಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಹಿರಿಯೂರು, ಹೊಸದುರ್ಗ ಹಾಗೂ ಚಿತ್ರದುರ್ಗದಲ್ಲಿ ಸಮಿತಿ ಸಭೆ ನಡೆಸಿ ವರದಿ ಸಲ್ಲಿಸಲಾಗಿದೆ. ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ಸಮಿತಿ ಸಭೆ ನಡೆಸಿ ವರದಿ ಸಲ್ಲಿಸಬೇಕಿದೆ. ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ದಾಳಿ ನಡೆಸಲಾಗುತ್ತಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ತಹಶೀಲ್ದಾರ್ ನಾಗವೇಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *