ಹಿರಿಯೂರಿಗೆ ದಕ್ಷಿಣ ಕಾಶಿ ಎಂದು ಹೆಸರೇಕೆ ಬಂತು ಗೊತ್ತಾ?

ರಾಜ್ಯ

ದಕ್ಷಿಣಕ್ಕೆ ಮುಖ ಮಾಡಿದ ಶಿವಲಿಂಗ – ಮಲ್ಲಮ್ಮನ ಮನೆಯೇ ದೇಗುಲ

ಫೆ. 24ರಂದು ದಕ್ಷಿಣಕಾಶಿ ಶ್ರೀತೇರುಮಲ್ಲೇಶ್ವರ ಬ್ರಹ್ಮರಥೋತ್ಸವ

ಹಿರಿಯೂರು : ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ದಕ್ಷಿಣಕಾಶಿ ಶ್ರೀತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಬಿರೇನಹಳ್ಳಿ ಮಜುರೆ ಕರಿಯಣ್ಣಹಟ್ಟಿ ಗ್ರಾಮದ ಶ್ರೀ ವೀರಕರಿಯಣ್ಣ ಅವರ ನೇತೃತ್ವದಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಮಘಾ ನಕ್ಷತ್ರದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಅಲ್ಲದೇ ಸಂಜೆ ೫ಗಂಟೆಗೆ ಶ್ರೀ ಚಂದ್ರಮೌಳೇಶ್ವರ ಹಾಗೂ ಶ್ರೀ ಉಮಾಮಹೇಶ್ವರ ರಥೋತ್ಸವ ನಡೆಯಲಿದೆ.

 

 

 

ಇತಿಹಾಸ: ತೇರುಮಲ್ಲೇಶ್ವರ ದೇವಾಲಯದ ಶಿವಲಿಂಗವು ಸುಮಾರು ೫೦೦ ವರ್ಷಗಳ ಇತಿಹಾಸ ಹೊಂದಿದ್ದು, ಮೂಲ ವಿಗ್ರಹ ಕಾಶಿಯಲ್ಲಿರುವಂತೆ ದಕ್ಷಿಣಕ್ಕೆ ಮುಖ ಮಾಡಿರುವುದರಿಂದ ಇತಿಹಾಸದಲ್ಲಿ ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಹೊಂದಿದೆ. ಸಾ.ಶ ೧೪೪೬ರಲ್ಲಿ ಚಿತ್ರದುರ್ಗದ ಪಾಳೇಗಾರ ಕಾಲದಲ್ಲಿ ಅಳ್ವಿಕೆ ಮಾಡಿದ ಕೆಂಚಪ್ಪನಾಯಕ ಕಟ್ಟಿಸಿದ ಈ ದೇವಾಲಯ ದ್ರಾವಿಡ ಶೈಲಿಯ ವಾಸ್ತುಶಿಲ್ಪ ರೀತಿಯಲ್ಲೆ ನಿರ್ಮಾಣವಾಗಿದೆ. ದೇವಾಲಯವು ಪ್ರವೇಶದ್ವಾರ, ದೀಪಸ್ಥಂಭ, ಧನಸ್ಸು, ಉಯ್ಯಾಲೆ ಕಂಬ ಪ್ರಮುಖ ಲಕ್ಷಣಗಳಿಂದ ಕೂಡಿದೆ.
ಪ್ರವೇಶ್ವದಾರ- ದೇವಾಲಯದ ಆರಂಭದಲ್ಲಿ ಇರುವ ಪ್ರವೇಶದ್ವಾರವು ದ್ರಾವಿಡ ಶೈಲಿಯಲ್ಲೇ ನಿರ್ಮಾಣವಾಗಿದ್ದು, ಮೇಲ್ಛಾವಣಿಯು ಹಿಂದೂ-ಶೈವ-ಮಹಾಕಾವ್ಯ-ಶಿವಪುರ ಹಾಗೂ ಹಿಂದೂ-ವೈಷ್ಣವ-ಮಹಾಕಾವ್ಯ-ರಾಮಾಯಣದ ವಿಶೇಷ ಚಿತ್ರಗಳ ಬಿತ್ತಿ  ಚಿತ್ರಗಳನ್ನು ಸುಂದರವಾಗಿ ಕಾಣುವ ರೀತಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಗೋಪುರವು ಬೃಹದಾಕಾರವಾಗಿದ್ದು, ಸುಮಾರು ೪೫ಅಡಿ ಎತ್ತರವನ್ನು ಹೊಂದಿದೆ. ಶಿವಧನಸ್ಸು- ದೇವಾಲಯದಲ್ಲಿರುವ ಮತ್ತೊಂದು ವಿಶೇಷತೆ ಶಿವಧನಸ್ಸು. ಇದಕ್ಕೆ ಜೀವವಿದೆ ಎಂಬ ಪ್ರತೀಕವು ಇದೆ ಎನ್ನುತ್ತಾರೆ. ಏಕೆಂದರೆ ಪ್ರತಿ ವರ್ಷವು ಎರಡು ಇಂಚು ಬೆಳೆಯುತ್ತದೆ ಎಂದು ಭಕ್ತಾಗಳಿಗೆ ನಂಬಿಕೆಯಿದೆ. ಈ ಧನಸ್ಸನ್ನು ತಂದಾಗ ಸುಮಾರು ೫ಅಡಿ ಇದ್ದು, ಇಂದು ೩೦ಅಡಿ ಉದ್ದ ಬೆಳೆದಿದೆ. ಪಾಳೇಗಾರ ಕೆಂಚಪ್ಪನಾಯಕನಿಗೆ ವೇದಾವತಿ ನದಿಯಲ್ಲಿ ಸಿಕ್ಕಿದ ಧನಸ್ಸು ಇದಾಗಿದೆ. ಇದನ್ನು ಜಾತ್ರೆ ಹಾಗೂ ಬ್ರಹ್ಮರಥೋತ್ಸವ ದಿನದಂದು ಮಾತ್ರ ಹೊರ ತೆಗೆದು ವೇದಾವತಿ ನದಿಗೆ ತೆಗೆದುಕೊಂಡು ಹೋಗಿ ಅಭಿಷೇಕ ಮಾಡಿ ನಂತರ ದೇವಾಲಯಕ್ಕೆ ಬರುವಾಗ ಅದು ನೆಲಮುಟ್ಟಿದರೆ, ಭಾರವಾದರೆ, ನಿಂತರೆ, ಆಪತ್ತು, ತೊಂದರೆ ಯಾಗುತ್ತದೆ. ಹಗುರವಾದರೆ ಮಳೆಬೆಳೆ ಸಮೃದ್ದಿಯಾಗುತ್ತದೆ. ಅದನ್ನು ದೇವಾಲಯಕ್ಕೆ ತಂದು ಮಾಘಮಾಸದ ಮಘಾ ನಕ್ಷತ್ರದಲ್ಲಿ ಪೂಜೆ ಮಾಡಿದ ನಂತರ ಬ್ರಹ್ಮರಥೋತ್ಸವ ಹಾಗೂ ಅನಂತರ ಚಂದ್ರಮೌಳೇಶ್ವರ, ಉಮಾಮಹೇಶ್ವರ ರಥೋತ್ಸವ ನಡೆಯುತ್ತದೆ.

ಉಯ್ಯಾಲೆಕಂಬ- ದೇವಾಲಯದ ಎದುರು ಭಾಗದಲ್ಲಿ ಬೃಹದಾಕಾರ ಉಯ್ಯಾಲೆ ಕಂಬವಿದೆ. ಇದಕ್ಕೆ ಕರ್ಪೂರ ಹಚ್ಚಿ ಬೆಳೆಗಿದರೆ ಹಾಗೂ ಪೂಜೆ ಮಾಡಿದರೆ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆಯು ಇದೆ. ಪ್ರತಿವರ್ಷವು ಜಾತ್ರೆ ನಡೆದ ಮೂರು ದಿನಗಳಲ್ಲಿ ಕರ್ಪೂರದಾರತಿ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಕರ್ಪೂರ ಹಚ್ಚಿ ಬೆಳಗಿಸುತ್ತಾರೆ.
ದೀಪಸ್ತಂಭ-ಶ್ರೀತೇರುಮಲ್ಲೇಶ್ವರ ದೇವಾಲಯದಲ್ಲಿ ಎಂಟು ದೀಪದ ಕಂಬಗಳಿದ್ದು, ಜಾತ್ರೆಗಳಲ್ಲಿ, ವಿಶೇಷ ಪೂಜಾ ದಿನಗಳಲ್ಲಿ ದೀಪ ಹಚ್ಚಿ ಬೆಳಗಿಸುತ್ತಾರೆ. ಸುಮಾರು ಹತ್ತು ಸೇರು ತೈಲ ಸಂಗ್ರಹವಾಗುತ್ತದೆ.

ನಂಬಿಕೆ: ದೇವಾಲಯದ ಬಗ್ಗೆ ಹಲವು ದಂತಕತೆಗಳು ಇದ್ದು, ಅವುಗಳಲ್ಲಿ ಈ ಕಥೆಯು ಪ್ರಮುಖವಾಗಿದೆ. ಹಿರಿಯೂರಿನಲ್ಲಿ ನೆಲೆಸಿದ್ದ ಹೇಮರೆಡ್ಡಿ ಮಲ್ಲಮ್ಮ ಪ್ರತಿವರ್ಷವು ಕಾಲುನಡಿಗೆಯಲ್ಲಿ ಶ್ರೀಶೈಲಕ್ಕೆ ಹೋಗಿ ತನ್ನ ಆರಾಧ್ಯ ದೈವ ಚನ್ನಮಲ್ಲಿಕಾರ್ಜುನ ದರ್ಶನ ಮಾಡಿ ಬರುತ್ತಿದ್ದಳು. ಆದರೆ ಒಂದು ಬಾರಿ ಪ್ರಯಾಣ ಬೆಳೆಸಿದಾಗ ದಣಿವಾದ ಸಮಯದಲ್ಲಿ ದಾರಿ ಮಧ್ಯೆದಲ್ಲಿ ಎಲೆ ಅಡಿಕೆ ಹಾಕಲು ಕಲ್ಲೊಂದನ್ನು ತೆಗೆದುಕೊಂಡು ಅಡಿಕೆ ಪುಡಿ ಮಾಡಲು ಬಳಸಿ ಅದನ್ನು ಎಸೆದು ಪ್ರಯಾಣ ಮುಂದುವರೆಸಿದಳು. ಆದರೆ ಮುಂದಿನ ದಾರಿಯಲ್ಲಿ ಅಡಿಕೆ ಪುಡಿ ಮಾಡುವಾಗಲು ಅದೇ ಕಲ್ಲು ಸಿಕ್ಕಿತು. ನಂತರ ದರ್ಶನ ಮುಗಿಸಿ ಮನೆಗೆ ಹಿಂತಿರುಗಿದಾಗಲೂ ತನ್ನ ಚೀಲದಲ್ಲಿ ಅದೇ ಕಲ್ಲು ಕಾಣಿಸಿತು. ಅಚ್ಚರಿಗೊಂಡು ಅದನ್ನು ಹೊರಗಡೆ ಬಿಸಾಕಿದಾಗ ಅದು ಮತ್ತೆ ಮನೆಯ ಒಳಗೆ ಇರುವ ಒಳಕಲ್ಲಿನಲ್ಲಿ ಬಂದು ಸೇರಿತು. ತನ್ನ ದೈವ ಸ್ಮರಣೆಯಲ್ಲಿ ಮಲಗಿದ್ದ ಮಲ್ಲಮ್ಮನಿಗೆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ದೇವರು ನಿನಿಗೆ ವಯಸ್ಸಾಯಿತು. ನೀನು ಶ್ರೀಶೈಲಕ್ಕೆ ಬರಲು ತೊಂದರೆಯಾಗದೇ ಕಲ್ಲಿನ ರೂಪದಲ್ಲಿ ಬಂದವನೇ ನಾನು, ಇಲ್ಲಿಯೇ ನನ್ನನ್ನು ಪೂಜಿಸು ಎಂದು ಹೇಳಿ ಮಾಯವಾಗಿತ್ತು. ಮಲ್ಲಮ್ಮ ಎಚ್ಚರಗೊಂಡು ನೋಡಿದಾಗ ಕಲ್ಲು ಲಿಂಗವಾಗಿ ಪರಿವರ್ತನೆಯಾಗಿತ್ತು. ನಂತರ ಮಲ್ಲಮ್ಮನ ಮನೇಯೇ ದೇಗುಲವಾಯಿತೆಂಬ ನಂಬಿಕೆಯಿದೆ. ಈ ಕಲ್ಲು ದಕ್ಷಿಣಕ್ಕೆ ಮುಖ ಮಾಡಿದ್ದರಿಂದ ದಕ್ಷಿಣ ಕಾಶಿ ಎಂದೇ ಕರೆಯಲಾಗುತ್ತಿದೆ. ಪ್ರತಿ ವರ್ಷವು ಜಾತ್ರಾ ಮಹೋತ್ಸವ ನಡೆಯುತ್ತದೆ.

ಒಟ್ಟಾರೆಯಾಗಿ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರನ ಐತಿಹಾಸಿಕ ಸ್ಥಳವಾಗಿದ್ದು, ಪ್ರತಿ ವರ್ಷ ತೇರು ಮಲ್ಲೇಶ್ವರನ ಬ್ರಹ್ಮ ರಥೋತ್ಸವ ನಡೆಯಲಿದೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾರೆ.

Leave a Reply

Your email address will not be published. Required fields are marked *