ಮೋದಿಯವರ ಮಹಿಳಾ ಮೀಸಲಾತಿ 2024, 2029 ಹಾಗೂ 2034 ರಲ್ಲೂ ಜಾರಿ ಆಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯ

 

ಮೋದಿಯವರ ಮಹಿಳಾ ಮೀಸಲಾತಿ 2024, 2029 ಹಾಗೂ 2034 ರಲ್ಲೂ ಜಾರಿ ಆಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಮಹಿಳಾ ಮೀಸಲಾತಿಗೆ ಡೀಲಿಮಿಟೇಷನ್, ಜನ ಗಣತಿಯ ಕೊಕ್ಕೆ ಹಾಕಿ ಆಯಸ್ಸು ಫಿಕ್ಸ್ ಮಾಡಿರುವುದು ಬಿಜೆಪಿಯ ಡೋಂಗಿತನ. ಆದ್ದರಿಂದ ಮಹಿಳಾ ಮೀಸಲಾತಿ ಜಾರಿ ಆಗುವುದೇ ಡೌಟು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ “ಮಹಿಳಾ ಮೀಸಲಾತಿ” ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎನ್ನುವ ಪ್ರಾಮಾಣಿಕ ಕಾಳಜಿ ಬಿಜೆಪಿಗೆ ಇದ್ದಿದ್ದರೆ ಇಷ್ಟೊಂದು ಅಡೆತಡೆಗಳನ್ನು ಹಾಕುತ್ತಿರಲಿಲ್ಲ.

ನರೇಂದ್ರ ಮೋದಿಯವರು ಜಾರಿ ಮಾಡಿರುವ ಮಹಿಳಾ ಮೀಸಲಾತಿಗೆ ಕೇಂದ್ರ ಸರ್ಕಾರ 15 ವರ್ಷ ಆಯಸ್ಸು ಫಿಕ್ಸ್ ಮಾಡಿದೆ. ಕಾಯ್ದೆ ಜಾರಿಯಾದ ದಿನದಿಂದ 15 ವರ್ಷ ಆಯಸ್ಸು ಇದೆ. ಅಂದರೆ ಈಗ ಕಾಯ್ದೆ ಜಾರಿ ಆಗಿದೆ. ಇದಕ್ಕೆ ಇನ್ನು 15 ವರ್ಷ ಮಾತ್ರ ಆಯಸ್ಸು. ಆದರೆ, ಜಾತಿ ಜನಗಣತಿ ಮತ್ತು ಡೀಲಿಮಿಟೇಷನ್ ಎನ್ನುವ ಎರಡು ಕೊಕ್ಕೆ ಹಾಕಿಟ್ಟಿದ್ದಾರೆ. ಇವರೆಡೂ ಮುಗಿಯುವ ವೇಳೆಗೆ 15 ವರ್ಷ ಆಗಿರತ್ತೆ. ಹೀಗಾಗಿ ಮಹಿಳಾ ಮೀಸಲಾತಿ ಕಾಯ್ದೆಗೆ ಜಾರಿ ಆಗುವ ಮೊದಲೇ ಅದರ ಆಯಸ್ಸೇ ಮುಗಿದು ಹೋಗಿರುತ್ತದೆ. ಇದು ಮಹಿಳೆಯರಿಗೆ ಮಾಡಿರುವ ಪರಮ ವಂಚನೆ ಎಂದು ಟೀಕಿಸಿದರು.

 

 

 

ಮಹಿಳಾ ಮೀಸಲಾತಿ ಜಾರಿ ಮಾಡುವುದಕ್ಕೆ ದೇವರೇ ನನ್ನನ್ನು ಕಳುಹಿಸಿದ್ದು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಮೊನ್ನೆ ಹೇಳಿದರು. ಈಗ ನೋಡಿದ್ರೆ ಈ ರೀತಿ ವಂಚನೆ ಮಹಿಳೆಯರಿಗೆ ಆಗಿದೆ. ಮಹಿಳೆಯರಿಗೆ ವಂಚನೆ ಮಾಡಿ ಅಂತನಾ ದೇವರು ನಿಮ್ಮನ್ನು ಕಳುಹಿಸಿದ್ದು ಎಂದು ಮುಖ್ಯಮಂತ್ರಿ ಗಳು ವ್ಯಂಗ್ಯವಾಗಿ ಪ್ರಧಾನಿಯವರನ್ನು ಪ್ರಶ್ನಿಸಿದರು.

ಮಹಿಳಾ ಮೀಸಲಾತಿ ಬಿಲ್ ಸಿದ್ದಪಡಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಯಾವತ್ತೂ ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಇದೆ. ಮಹಿಳಾ ಮೀಸಲಾತಿಯಲ್ಲೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಇರಬೇಕು ಎನ್ನುವುದಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಅದರಲ್ಲೂ ಶೇ 33 ಮಾತ್ರವಲ್ಲ, ಶೇ 50 ರಷ್ಟು ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು.

ಈಗ ಮೋದಿಯವರು ಜಾರಿ ಮಾಡಿದ್ದೇನೆ ಎನ್ನುತ್ತಿರುವ ಈ ಮಹಿಳಾ ಮೀಸಲಾತಿ 2024 ರಲ್ಲೂ ಜಾರಿ ಆಗುವುದಿಲ್ಲ. 2029 ರಲ್ಲೂ ಜಾರಿ ಆಗುವುದಿಲ್ಲ. 2034 ರಲ್ಲೂ ಜಾರಿ ಆಗುವುದಿಲ್ಲ. ಅಷ್ಟೊತ್ತಿಗೆ ಕಾಯ್ದೆಯ ಆಯಸ್ಸೇ ಮುಗಿದಿರುತ್ತದೆ ಎಂದು ಬಿಡಿ ಬಿಡಿಯಾಗಿ ಬಿಜೆಪಿಯ ತಂತ್ರವನ್ನು ವಿವರಿಸಿದರು.

ಮಹಿಳೆಯರೂ ಶೂದ್ರರ ರೀತಿ ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿದ್ದರು. ಮಹಿಳೆಯರ ಹೋರಾಟ ಮತ್ತು ಸಂವಿಧಾನದ ಕಾರಣಕ್ಕೆ ಶಿಕ್ಷಣದಲ್ಲಿ ಅವಕಾಶ ದೊರೆಯಿತು. ಅವಕಾಶ ಸಿಕ್ಕಾಗ ಪುರುಷರಿಗಿಂತ ಶಿಕ್ಷಣದಲ್ಲಿ ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ಮೀಸಲಾತಿ ಜಾರಿ ಆಗಿಬಿಟ್ಟಿತು ಎಂದು ಸುಳ್ಳು ನಂಬಿಕೊಂಡು ಸುಳ್ಳು ಚಪ್ಪಾಳೆ ಹೊಡಿಬೇಡಿ. ಮಹಿಳಾ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಾವು, ನೀವೆಲ್ಲಾ ಹೋರಾಟ ಮುಂದುವರೆಸಬೇಕು ಎಂದು ಕರೆ ನೀಡಿದರು.

ಶಿಕ್ಷಣ ತಜ್ಞ, ರಾಜಕೀಯ ವಿಶ್ಲೇಷಕರಾದ ಪ್ರೊ.ಮುಜಫರ್ ಅಸಾದಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ವಿಷಯ ಮಂಡಿಸಿದರು.
ಶಾಸಕಿ ನಯನ ಮೋಟಮ್ಮ, ನ್ಯಾಯವಾದಿ ಅಶ್ವಿನಿ ಓಬಳೇಶ್, ಹಿಂದುಳಿದ ವರ್ಗಗಳ ಒಕ್ಕೂಟದ ನಾಯಕರಾದ ಕೆ.ಎಂ.ರಾಮಚಂದ್ರಪ್ಪ, ದಲಿತ ಹೋರಾಟಗಾರ ಮಾವಳ್ಳಿ ಶಂಕರ್, ನ್ಯಾಯವಾದಿ ಎನ್.ಅನಂತ ನಾಯಕ್, ಬಿ.ಟಿ.ಲಲಿತಾ ನಾಯಕ್ ಮತ್ತು ಚುಕ್ಕಿ ನಂಜುಂಡಸ್ವಾಮಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *