ಅತ್ಯಧಿಕ ಮತಗಳಿಂದ ನನ್ನನ್ನು ಗೆಲ್ಲಿಸಿ: ಎಂ. ಚಂದ್ರಪ್ಪ

ಜಿಲ್ಲಾ ಸುದ್ದಿ

ಹೊಳಲ್ಕೆರೆ : ತಾಯಂದಿರು ಎಲ್ಲೆಲ್ಲಿ ರಂಗೋಲಿ ಹಾಕಿ ಸಗಣಿ ನೀರು ಹಾಕುತ್ತಿದ್ದರೋ ಅಲ್ಲೆಲ್ಲಾ ಸಿಮೆಂಟ್ ರಸ್ತೆ ಮಾಡಿಸಿದ್ದೇನೆ. ಓವರ್ ಹೆಡ್ ಟ್ಯಾಂಕ್ ಕಟ್ಟಿಸಿ ಆರು ನೂರು ಕೋಟಿ ರೂ.ವೆಚ್ಚದಲ್ಲಿ ಕೆರೆ ಕಟ್ಟೆಗಳ ನಿರ್ಮಾಣ ಮಾಡಲಾಗಿದೆ ಎಂದು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಸಿರಿಗೆರೆ ಮತ್ತು ಭರಮಸಾಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ಬಿರುಸಿನ ಮತಯಾಚನೆ ನಡೆಸಿ ಮಾತನಾಡಿದ ಅಭ್ಯರ್ಥಿ ಎಂ.ಚಂದ್ರಪ್ಪ ರೈತರು ವಿದ್ಯುತ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದುದನ್ನು ಕಂಡು 220 ಕೋಟಿ ರೂ.ವೆಚ್ಚದಲ್ಲಿ ಅಜ್ಜಪ್ಪನಹಳ್ಳಿ ಬಳಿ ಪವರ್ ಸ್ಟೇಷನ್ ಕಟ್ಟಲಾಗಿದೆ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಕೋಟಿ ರೂ.ಗಳ ಅನುದಾನ ನೀಡಿದರು. ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ನನ್ನ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿಯಿಟ್ಟುಕೊಂಡು ಕೇಳಿದಷ್ಟು ಅನುದಾನ ಬಿಡುಗಡೆಗೊಳಿಸಿದ್ದರಿಂದ ಇಷ್ಟೆಲ್ಲಾ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ನಡೆಯಬೇಕೆಂದು ಪ್ರಧಾನಿ ಮೋದಿ ಆಸೆ ಪಟ್ಟಿದ್ದು, ಎರಡನೆ ಬಾರಿಗೆ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಂಡಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ.ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಜನತೆಯಲ್ಲಿ ಮನವಿ ಮಾಡಿದರು.
ಇನ್ನೊಂದು ಕೆರೆಗೆ ಪೈಪ್‍ಲೈನ್ ಹಾಕಲು ಹಣ ಬಿಡುಗಡೆ ಮಾಡಿದ್ದೇನೆ. ಐದು ಕೋಟಿ ರೂ.ವೆಚ್ಚದಲ್ಲಿ ಚೆಕ್‍ಡ್ಯಾಂ ನಿರ್ಮಿಸಿ ಬೋರ್‍ವೆಲ್‍ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುವಂತೆ ಮಾಡಿದ್ದೇನೆ. ಇದರಿಂದ ರೈತರು ತೋಟಗಳನ್ನು ಮಾಡಿಕೊಳ್ಳಲು ಅನುಕೂಲವಾಗಲಿದೆ. ಇದೆ ತಿಂಗಳ ಹತ್ತೊಂಬತ್ತರಂದು ನಾಮಪತ್ರ ಸಲ್ಲಿಸುತ್ತಿದ್ದು, ಕ್ಷೇತ್ರದ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸುವಂತೆ ಅಭ್ಯರ್ಥಿ ಎಂ.ಚಂದ್ರಪ್ಪ ವಿನಂತಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್, ಡಿ.ಎಸ್.ಪ್ರದೀಪ್‍ಕುಮಾರ್, ಮಂಜುನಾಥ್, ಡಿ.ಎಸ್.ಪ್ರವೀಣ್‍ಕುಮಾರ್, ಕಲ್ಲೇಶ್, ಮೋಹನ್, ಬಿಜೆಪಿ. ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಮತಪ್ರಚಾರದಲ್ಲಿ ಭಾಗವಹಿಸಿದ್ದರು.

 

 

 

Leave a Reply

Your email address will not be published. Required fields are marked *