ನ್ಯಾ. ಸದಾಶಿವ ವರದಿ ಕ್ಯಾಬಿ‌ನೆಟ್ ನಲ್ಲಿ ಮಂಡಿಸಲು ಒತ್ತಾಯಿಸಿ ನ.6 ರಂದು ಮಾದಿಗ ಮುಖಂಡರ ಸಭೆ

ರಾಜ್ಯ

 ನ್ಯಾ.ಸದಾಶಿವ ಆಯೋಗವನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಬೇಕು, ಕಾಂತರಾಜ್ ಆಯೋಗದ  ವರದಿ ಸ್ವೀಕರಿಸಬೇಕು ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಕುರಿತು ನವೆಂಬರ್ 6ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಮಹಾರಾಣಿ ಕಾಲೇಜ್ ಸಮೀಪದ ಸ್ಕೌಟ್ ಆ್ಯಂಡ್ ಗೈಡ್ಸ್ ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮಾದಿಗ ಸಮುದಾಯದ ಪ್ರಮುಖ ಮುಖಂಡರ ಸಭೆ ಕರೆಯಲಾಗಿದೆ.

ಕರ್ನಾಟಕ ಆದಿಜಾಂಭವ ಸಾಂಸ್ಕ್ರತಿಕ ಸಮಿತಿ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪೂರ, ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ, ಮಾಜಿ ಸಚಿವ ಎಚ್.ಆಂಜನೇಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಶಾಸಕರಾದ ರೂಪಾ ಶಶಿಧರ್, ನೆಲಮಂಗಲದ ಎನ್.ಶ್ರೀನಿವಾಸ್, ಮಾಯಕೊಂಡದ ಕೆ.ಎಸ್.ಬಸವಂತಪ್ಪ, ಎಂಎಲ್ಸಿ ಡಾ.ತಿಮ್ಮಯ್ಯ, ಕೆಪಿಸಿಸಿ ಪರಿಶಿಷ್ಡ ಜಾತಿ ವಿಭಾಗದ ಅಧ್ಯಕ್ಷ ಧರ್ಮಸೇನ್, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಸೇರಿದಂತೆ ಸಮುದಾಯದ ಅನೇಕ ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ದಲಿತ ಸಂಘಟನೆಗಳು, ಸಾವಿರಾರು ಮುಖಂಡರು ನಡೆಸಿದ ಹೋರಾಟ ಹಾಗೂ ಸಮುದಾಯದ ಜನಪ್ರತಿನಿಧಿಗಳ ಒತ್ತಡದ ಫಲ ನ್ಯಾ.ಸದಾಶಿವ ಆಯೋಗದ ವರದಿ ಸರ್ಕಾರದ ಕೈಸೇರಿ ವರ್ಷಗಳೇ ಕಳೆದಿವೆ. ಜೊತೆಗೆ ಕಾಂತರಾಜ್ ಆಯೋಗ ಸಿದ್ದಪಡಿಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಜಾತಿ ಗಣತಿ ವರದಿಯನ್ನು ಸ್ವೀಕರಿಸಿಲ್ಲ. ಇಲ್ಲಿಯವರೆಗೂ ಈ ಎರಡು ವರದಿ ಅನುಷ್ಠಾನ ವಿಷಯದಲ್ಲಿ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ  ವಹಿಸಿವೆ.

 

 

 

ಪ್ರಸ್ತುತ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾರೆ. ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು, ಮೊದಲ ಅಧಿವೇಶನದಲ್ಲಿಯೇ ನ್ಯಾ.ಸದಾಶಿವ ಆಯೋಗದ ವರದಿ ಮಂಡಿಸಿ, ಸುಧೀರ್ಘ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಹಾಗೂ ಕಾಂತರಾಜ್ ಆಯೋಗ ವರದಿ ಸ್ವೀಕರಿಸಲಾಗುವುದು ಎಂದು ಮಾತು ಕೊಟ್ಡಿದ್ದರು. ಅಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೂ ಸೇರಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಧಿವೇಶನದಲ್ಲಿ ನ್ಯಾ.ಸದಾಶಿವ ಆಯೋಗದ ವರದಿಯನ್ನು ಮಂಡಿಸಿಲ್ಲ. ಜೊತೆಗೆ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಿಲ್ಲ. ಈ ಎರಡು ವರದಿಗಳು ನೊಂದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲಿವೆ.

ಆದ್ದರಿಂದ ಮುಂಬರುವ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡಿಸಬೇಕು. ಜೊತೆಗೆ ಅಧಿವೇಶನ ಆರಂಭದೊಳಗೆ ಕಾಂತರಾಜ್ ಆಯೋಗದ ವರದಿ ಸ್ವಕರಿಸಿ ಪ್ರಕಟಿಸಬೇಕು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಈ ಎರಡು ವಿಷಯದಲ್ಲಿ ಮಾತು ಕೊಟ್ಟಂತೆ ನಡೆದುಕೊಳ್ಳಬೇಕೆಂದು ಒತ್ತಾಯಿಸಬೇಕಿದೆ.
ಜೊತೆಗೆ ನಿಗಮ-ಮಂಡಳಿ, ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರು, ವಿಶ್ವವಿದ್ಯಾಲಯಗಳಲ್ಲಿ ಕುಲಪತಿ, ಕುಲಸಚಿವರು, ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಮಾದಿಗ ಸಮುದಾಯಕ್ಕೆ ಹೆಚ್ಚು ಪ್ರಾಧನ್ಯತೆ ನೀಡಬೇಕು ಎಂಬ ಬೇಡಿಕೆ ಸೇರಿ ವಿವಿಧ ವಿಷಯಗಳನ್ನು ಚರ್ಚಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವುದು. ಜೊತೆಗೆ ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಭೆ ಆಯೋಜಿಸಲಾಗಿದ್ದು, ಸಮುದಾಯದ ಚಿಂತಕರು,  ಸಾಹಿತಿಗಳು, ಹಿರಿಯ ನ್ಯಾಯವಾದಿಗಳು ಮಾಜಿ ಶಾಸಕರು, ಸಂಸದರು, ನಿವೃತ್ತ ಉನ್ನತ ಅಧಿಕಾರಿಗಳು, ಸಾಹಿತಿಗಳು, ಹಿರಿಯ ಹೋರಾಟಗಾರರು, ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಡಾ.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಕೋರಿದ್ದಾರೆ.

Leave a Reply

Your email address will not be published. Required fields are marked *