ವಿಜೃಂಭಣೆಯಿಂದ  ಸಾಗಿದ ತೇರುಮಲ್ಲೇಶನ ಬ್ರಹ್ಮ ರಥೋತ್ಸವ

ಜಿಲ್ಲಾ ಸುದ್ದಿ

ವಿಜೃಂಭಣೆಯಿಂದ  ಸಾಗಿದ ತೇರುಮಲ್ಲೇಶನ ಬ್ರಹ್ಮ ರಥೋತ್ಸವ

ಐತಿಹಾಸಿಕ ಸುಪ್ರಸಿದ್ಧ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ಸುಮಾರು 1.30ರ ಸಮಯದಲ್ಲಿ ಪಶುಪಾಲಕ ವೀರಕರಿಯಣ್ಣ ಸ್ವಾಮಿಯ ಮುಖಂಡತ್ವ ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವಕ್ಕೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹಾಗೂ ಮುಜರಾಯಿ ಅಧಿಕಾರಿ ಪ್ರಶಾಂತ್ ಕೆ ಪಾಟೀಲ್ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಪೂಜೆ ಮುಗಿದ ಬಳಿಕ ಭಕ್ತರು ಭಕ್ತಿಯಿಂದ ಮಲ್ಲೇಶ್ವರನನ್ನು ಜಪಿಸುತ್ತ
ರಥವನ್ನು ದೇವಸ್ಥಾನದಿಂದ ಸಿದ್ದನಾಯಕ ವೃತ್ತದವರೆಗೂ ಭಕ್ತರು ಭಕ್ತಿಭಾವದಿಂದ ಎಳೆದರು. ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತನ್ನ ಇಷ್ಟಾರ್ಥಗಳನ್ನು ಬೇಡಿಕೊಂಡರು. ರಥೋತ್ಸವ ವೇಳೆ ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಮಜ್ಜಿಗೆ, ಪಾನಕ, ಕೋಸಂಬರಿ, ತಂಪು ಪಾನೀಯಗಳು ಸೇರಿದಂತೆ ಉಪಹಾರದ ವ್ಯವಸ್ಥೆ ಕಲ್ಪಿಸಿದ್ದರು.

ಇನ್ನು ಶ್ರೀ ತೇರು ಮಲ್ಲೇಶ್ವರ ಬ್ರಹ್ಮರಥೋತ್ಸವ ಅಂಗವಾಗಿ ಪ್ರತಿವರ್ಷದಂತೆ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆ ನಡೆಯಿತು. 1 ಲಕ್ಷದಿಂದ ಆರಂಭಗೊಂಡ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಪೈಪೋಟಿ ಆರಂಭವಾಯಿತು. ನಂತರ ಅಂತಿಮವಾಗಿ ಮಾಜಿ ಸಚಿವ ಡಿ ಸುಧಾಕರ್ ಅವರು 10 ಲಕ್ಷಕ್ಕೆ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ತನ್ನದಾಗಿಸಿಕೊಂಡರು. ಕಳೆದ ಬಾರಿಯು ಮಾಜಿ ಸಚಿವ ಡಿ ಸುಧಾಕರ್ ಅವರು 12 ಲಕ್ಷಕ್ಕೆ ಮುಕ್ತಿ ಬಾವುಟವನ್ನು ಪಡೆದುಕೊಂಡಿದ್ದರು. ಕಳೆದ ಬಾರಿಗಿಂತ ಈ ಬಾರಿ ಕಡಿಮೆ ದರದಲ್ಲಿ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು.

ರಥೋತ್ಸವದಲ್ಲಿ ವೀರಗಾಸೆ ಡೊಳ್ಳು ಕುಣಿತ, ತಮಟೆ ವಾದ್ಯ, ಈಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿದ್ದವು. ದೇವಸ್ಥಾನದ ಸುತ್ತ ಮುತ್ತಲು ಭಕ್ತರ ಸಾಗರವೇ ಹರಿದು ದೃಶ್ಯ ಸಾಮಾನ್ಯವಾಗಿತ್ತು.

ಇದೇ ಸಂದರ್ಭದಲ್ಲಿ ಅಭಿಮಾನಿಗಳು ಶಾಸಕಿ ಕೆ ಪೂರ್ಣಿಮಾ ಪತಿ ಶ್ರೀನಿವಾಸ್ ಅವರನ್ನು ಹೆಗಲಮೇಲೆ ಹೊತ್ತು ಕುಣಿದರೆ, ಕಾಂಗ್ರೆಸ್ ಕಾರ್ಯಕರ್ತರು ಪರವಾಗಿ ಕೇಕೆ, ಶಿಳ್ಳೆ, ಚಪ್ಪಾಳೆ ಹಾಕಿದರು.

ಇದಕ್ಕೂ ಮೊದಲು ಬೆಳಿಗ್ಗೆ 11 ಗಂಟೆ ಸಮಯದಲ್ಲಿ ದೇವಸ್ಥಾನದ ಕೈವಾಡಸ್ಥರು ಶಿವೋತ್ಸ ಪೂಜೆ ನೇರವೇರಿಸಿದರು. ಅಂದರೆ ವೇದಾವತಿ ನದಿಯಲ್ಲಿ ಗಂಗಾ ಪೂಜೆ ನೇರವೇರಿಸಿದ ಬಳಿಕ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ದೇವರನ್ನು ಮೆರವಣಿಗೆಯಲ್ಲಿ ತಂದು ತೇರಿನ ಸುತ್ತ ಪ್ರದಕ್ಷಿಣೆ ಹಾಕಿದ ಮೇಲೆ ತೇರಿನಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಜಾತ್ರೆಯಲ್ಲಿ ಶಾಸಕಿ ಕೆ ಪೂರ್ಣಿಮಾ, ಎಂಎಲ್ಸಿ ಕೆಎಸ್. ನವೀನ್, ಮಾಜಿ ಸಚಿವ ಡಿ ಸುಧಾಕರ್, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮುಜರಾಯಿ ಅಧಿಕಾರಿ ಪ್ರಶಾಂತ್ ಕೆ ಪಾಟೀಲ್, ಯೋಜನಾ ಪ್ರಾಧಿಕಾರದ ಆಯುಕ್ತ ಜಿ.ಹೆಚ್. ಸತ್ಯನಾರಾಯಣ, ಮೂಡಲಗಿರಿಯಪ್ಪ, ನಾಗೇಂದ್ರ ನಾಯ್ಕ, ಈ. ಮಂಜುನಾಥ್ ಸೇರಿದಂತೆ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.

ಪಾಳೇಗಾರ ವಂಶಸ್ಥ ರಾಜ ಕೆಂಚಪ್ಪ ನಾಯಕ 1446 ರಲ್ಲಿ ನಿರ್ಮಿಸಿರುವ ತೇರುಮಲ್ಲೇಶ್ವರ ಸ್ವಾಮಿ ದೇಗುಲದ ಮೂಲವಿಗ್ರಹ ಕಾಶಿಯಲ್ಲಿ ಇರುವಂತೆ ದಕ್ಷಿಣ ದಿಕ್ಕಿಗೆ ಮುಖ ಮಾಡಿದ ಕಾರಣಕ್ಕೆ ದೇಗುಲವನ್ನು ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ.

 

 

 

ಶ್ರೀಶೈಲ ಮಲ್ಲಿಕಾರ್ಜುನ ಪರಮ ಭಕ್ತೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮ ತನ್ನ ಇಳಿ ವಯಸ್ಸಿನಲ್ಲಿ ಶ್ರೀಶೈಲಕ್ಕೆ ನಡೆದುಕೊಂಡು ಹೋಗಿ ದೇವರ ದರ್ಶನ ಮಾಡಿ ಬರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಆಕೆಯ ಕನಸಿನಲ್ಲಿ ಕಾಣಿಸಿಕೊಂಡ ಮಲ್ಲಿಕಾರ್ಜುನ ಸ್ವಾಮಿ ಮಾತು ಕೊಟ್ಟಿದ್ದರ ಪರಿಣಾಮವಾಗಿ ಮಲ್ಲೇಶ್ವರ ಸ್ವಾಮಿ ದೇಗುಲ ಇಲ್ಲಿ ನಿರ್ಮಾಣವಾಗಿದೆ ಎಂಬುದು ಜನರ ವಾಡಿಕೆ.
ಹಿರಿಯೂರಿನಲ್ಲಿ ನೆಲೆಸಿದ್ದ ಮಲ್ಲಮ್ಮ ಹಾಗಾಗ ಕಾಲ್ನಡಿಗೆಯಲ್ಲಿ ಶ್ರೀಶೈಲಕ್ಕೆ ಹೋಗಿ ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನ ದರ್ಶನ ಮಾಡಿ ಬರುತ್ತಿದ್ದಳು. ಒಮ್ಮೆ ಹೀಗೆಯೇ ಶ್ರೀಶೈಲಕ್ಕೆ ಪ್ರಯಾಣಿಸುವಾಗ ದಣಿವಾಗಿದೆಯೆಂದು ಎಲೆ ಅಡಿಕೆ ಮೆಲ್ಲಲು ಬಯಸಿದಾಗ ಅಡಿಕೆ ಪುಡಿ ಮಾಡಿಕೊಳ್ಳಲು ಕಲ್ಲೊಂದನ್ನು ಎತ್ತಿಕೊಂಡು ಪುಡಿಮಾಡಿ ನಂತರ ಬಿಸಾಡುತ್ತಾಳೆ.
ಮುಂದೆ ದಾರಿಯಲ್ಲಿ ಎರಡು ಮೂರು ಬಾರಿ ಅಡಿಕೆಪುಡಿ ಮಾಡುವಾಗಲೂ ಅದೇ ಕಲ್ಲು ಸಿಕ್ಕಿದ್ದಲ್ಲದೆ ಮನೆಗೆ ಮರಳಿ ಬಂದಾಗಲೂ ತನ್ನ ಅಡಿಕೆ ಚೀಲದಲ್ಲಿ ಆ ಕಲ್ಲು ಗೋಚರಿಸುತ್ತದೆ. ಅಚ್ಚರಿಗೊಂಡ ಮಲ್ಲಮ್ಮ ಅದನ್ನು ಹೊರಗೆ ಬಿಸಾಡಿದಾಗ ಅದು ಮನೆಯ ಒಳಗಿದ್ದ ಒಳ ಕಲ್ಲಿನಲ್ಲಿ ಬಂದು ಕುಳಿತುಕೊಳ್ಳುತ್ತದೆ.

ಚೆನ್ನಮಲ್ಲಿಕಾರ್ಜುನನ ಸ್ಮರಣೆಯಲ್ಲಿ ಮಲಗಿದ್ದ ಮಲ್ಲಮ್ಮನಿಗೆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡ ದೇವರು “ಇಂದೂ ನಿನಗೆ ವಯಸ್ಸಾಯಿತು. ಶ್ರೀಶೈಲಕ್ಕೆ ಬರುವ ತೊಂದರೆ ತೆಗೆದುಕೊಳ್ಳಬೇಡ. ಕಲ್ಲಿನ ರೂಪದಲ್ಲಿ ಬಂದವನು ನಾನೇ ಇಲ್ಲಿ ನನ್ನನ್ನು ಪೂಜಿಸು” ಎಂದು ಹೇಳಿ ಮಾಯವಾದಂತೆ.

ಕನಸಿನಿಂದ ಎಚ್ಚರಗೊಂಡು ನೋಡಿದಾಗ ಒಳಕಲ್ಲಿನಲ್ಲಿ ಇದ್ದ ಕಲ್ಲು ಲಿಂಗ ವಾಗಿತ್ತು ಈ ಘಟನೆ ನಂತರ ಮಲ್ಲಮ್ಮನ ಮನೆಯೇ ಮಲ್ಲೇಶ್ವರ ದೇಗುಲ ವಾಯಿತು ಎಂಬ ಪ್ರತೀತಿ ಇದೆ. ಮಲ್ಲೇಶ್ವರ ದೇಗುಲ ಉದ್ಭವವಾದ ಕೆಲವು ವರ್ಷಗಳ ಬಳಿಕ ನೆರೆಯ ಚಿಕ್ಕಮಗಳೂರು ಜಿಲ್ಲೆಯ ಯಗಟಿ ಎಂಬಲ್ಲಿ ಮಲ್ಲೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತಿದ್ದಾಗ ಭೀಕರ ಗಾಳಿ, ಮಳೆ ಆರಂಭವಾಗಿ ವೇದಾವತಿ ನದಿಯ ಪ್ರವಾಹದಲ್ಲಿ ರಥ ಕೊಚ್ಚಿ ಹೋಗುತ್ತದೆ.

ಅಂದಿನಿಂದ ಮಲ್ಲೇಶ್ವರನನ್ನು ತೇರುಮಲ್ಲೇಶ್ವರ ಎಂದು ಕರೆಯಲಾಗುತ್ತಿದೆ. ಅಂದಿನಿಂದ ಪ್ರತಿವರ್ಷ ಮಾಘ ಮಾಸದ ಮಾಘ ನಕ್ಷತ್ರದಲ್ಲಿ ಸ್ವಾಮಿಯ ರಥೋತ್ಸವ ನಡೆಯುತ್ತದೆ ಅಲ್ಲದೆ ಅಂದೆ ಚಂದ್ರಮೌಳೇಶ್ವರ ಉಮಾಮಹೇಶ್ವರ ಸ್ವಾಮಿಗಳ ರಥೋತ್ಸವ ನಡೆಯುತ್ತದೆ.

ಹಿರಿಯೂರು ತಾಲ್ಲೂಕಿನ ಬೀರೆನಹಳ್ಳಿ ಮುಜರೆಯ ಕರಿಮುದ್ದಯ್ಯನಹಟ್ಟಿ ಗ್ರಾಮದ ಬುಡಕಟ್ಟು ಕಾಡುಗೊಲ್ಲ ಸಮುದಾಯದ ಸಾಂಸ್ಕೃತಿಕ ವೀರ ನಾಯಕ ವೀರಕರಿಯಣ್ಣ ಸ್ವಾಮಿ ದೇವರು ಬರುವವರೆಗೂ ತೇರು ಮಲ್ಲೇಶ್ವರ ಸ್ವಾಮಿಯ ರಥ ಮುಂದಕ್ಕೆ ಚಲಿಸುವುದಿಲ್ಲ. ಬುಡಕಟ್ಟು ಕಾಡುಗೊಲ್ಲರ ವೀರ ಕರಿಯಣ್ಣ ದೇವರು ತೇರುಮಲ್ಲೇಶ್ವರ ಆಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ ಬಳಿಕವೇ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತದೆ.

ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಯಗಟಿ ಎಂಬಲ್ಲಿ ಮಲ್ಲೆಶ್ವರ ಸ್ವಾಮಿ ರಥೋತ್ಸವ ನಡೆಯುತ್ತಿದ್ದಾಗ ಭೀಕರ ಗಾಳಿ, ಮಳೆ ಆರಂಭವಾಗಿ ವೇದಾವತಿ ನದಿಯ ಪ್ರವಾಹದಲ್ಲಿ ರಥ ಕೊಚ್ಚಿ ಬರುತ್ತದೆ. ನದಿಯಲ್ಲಿ ಕೊಚ್ಚಿ ಬಂದ ರಥ ಇಲ್ಲಿನ ರಾಜರ ಗಮನಕ್ಕೆ ಬರುತ್ತದೆ.

ಆನೆ.ಕುದುರೆ ಮೂಲಕ ರಥವನ್ನು ಮೆಲಕ್ಕೆತ್ತುವ ಕಾರ್ಯ ನಡೆಯುತ್ತದೆ. ಆದರೆ ರಥ ಬರುವುದಿಲ್ಲ ಎಂದು ರಥವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಗ ಪಶುಪಾಲಕ ನಾಗಿದ್ದ ವೀರ ಕರಿಯಣ್ಣ ನೋಡಿ ಅಪ್ಪಣೆ ಕೊಟ್ಟರೆ ನಾನು ರಥವನ್ನು ದಡಕ್ಕೆ ಎಳೆಯುತ್ತಲೇ ನೆಂದು ಕೇಳಿದಾಗ ರಾಜರು ಅಪ್ಪಣೆ ಕೊಡುತ್ತಾರೆಂತೆ. ನಂತರ ವೀರ ಕರಿಯಣ್ಣನು ಎರಡು ಹೋರಿಗಳ ಮೂಲಕ ಹೆಗಲ ಮೇಲೆ ಕಂಬಳಿಯನ್ನು ತೆಗೆದು ಹಗ್ಗವನ್ನಾಗಿ ಮಾಡಿ ರಥಕ್ಕೆ ಕಟ್ಟಿ ಯಾರು ನೋಡದ ಮಧ್ಯರಾತ್ರಿ ಸಮಯದಲ್ಲಿ ರಥವನ್ನು ದೇವಸ್ಥಾನದ ಮುಂದಕ್ಕೆ ಎಳೆದು ತಂದು ನಿಲ್ಲಿಸುತ್ತಾನೆ.

ಬೆಳಿಗ್ಗೆ ರಥವನ್ನು ನೋಡಿದ ಭಕ್ತರು ಅಚ್ಚರಿ ಪಡುತ್ತಾರೆ. ಈ ಹಿಂದೆ ತೇರುಮಲ್ಲೇಶ್ವರ ದೇವಸ್ಥಾನವನ್ನು ಕಟ್ಟುವ ಸಂದರ್ಭದಲ್ಲಿ ತಳಪಾಯ ಹಾಕುವಾಗ ಪೂಜಾ ಕಾರ್ಯಕ್ರಮದಲ್ಲಿ ಹಾಲುತುಪ್ಪ ಬಿಡುವ ಸಂಪ್ರದಾಯವಿರುತ್ತದೆ. ಬುಡಕಟ್ಟು ಕಾಡುಗೊಲ್ಲರ ವೀರಗಾರನಾದ ಕರಿಯಣ್ಣ ಒಬ್ಬ ಪೂಜಾರಿ ಹಾಗೂ ಅಪಾರ ದೈವ ಭಕ್ತ ಉಳ್ಳವನಾಗಿದ್ದನು.

ಪಶುಪಾಲಕ ನಾದ ವೀರ ಕರಿಯಣ್ಣ ದೇಗುಲದ ಅಡಿಪಾಯಕ್ಕೆ ಹಾಲನ್ನು ಮೀಸಲಾಗಿ ತಂದು ದೇವಸ್ಥಾನದ ಅಡಿಪಾಯಕ್ಕೆ ಹಾಕುತ್ತಾನೆ. ಅಂದಿನಿಂದ ಇಂದಿನವರೆಗೂ ಕರಿಯಣ್ಣ ಮುಂದಾಳತ್ವದಲ್ಲಿ ರಥೋತ್ಸವ ನಡೆಯುತ್ತದೆ ಎಂದು ಗ್ರಾಮದ ಹಿರಿಯ ವ್ಯಕ್ತಿ ಕೆ. ವೀರಪ್ಪ ತಿಳಿಸುತ್ತಾರೆ. ಕೆಂಚಪ್ಪ ನಾಯಕ ಮಾಯಸಂದ್ರ ಗ್ರಾಮದವರಾಗಿದ್ದು, ವೀರ ಕರಿಯಣ್ಣ ಪಕ್ಕದ ಬೀರೆನಹಳ್ಳಿ ಕರಿಯ್ಯನಹಟ್ಟಿ ಗ್ರಾಮದವರಾಗಿದ್ದರು. ಇಬ್ಬರಿಬ್ಬರಿಗೂ ಅವಿನಾಭಾವ ಸಂಬಂಧ ಇತ್ತು ಎನ್ನಲಾಗಿದೆ ವೀರ ಕರಿಯಣ್ಣನು ಪಶುಪಾಲಕನಾಗಿದ್ದನು ಎನ್ನುವ ಹಿರಿಯರ ಪ್ರತಿತಿ ಇದೆ.

Leave a Reply

Your email address will not be published. Required fields are marked *