ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಹುತೇಕ ರಘುಚಂದನ್ ಗೆ ಫಿಕ್ಸ್ ?

ರಾಜ್ಯ

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಆಕಾಂಕ್ಷಿಗಳು ತೀವ್ರ ಪೈಪೋಟಿ ನೀಡಿದ್ದಾರೆ. ಅದರಲ್ಲೂ ಮೊದಲಿಗೆ ಮಾದಾರಚನ್ನಯ್ಯ ಶ್ರೀಗಳ ಹೆಸರು ಬಾರೀ ಚಲಾವಣೆಯಲ್ಲಿತ್ತು. ಇವರ ಜೊತೆಯಲ್ಲಿ ಕೇಂದ್ರದ ಮಾಜಿ ಸಚಿವ ಎ.‌ನಾರಾಯಣಸ್ವಾಮಿ, ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಪುತ್ರ ಎಂ‌ಸಿ ರಘುಚಂದನ್ ಹೆಸರು ಕೂಡ ಇದ್ದು, ಇವರೆಲ್ಲರೂ ಪೈಪೋಟಿಯಲ್ಲಿದ್ದರು. ಕಳೆದ ವಾರ ಭೋವಿ ಗುರು ಪೀಠದಲ್ಲಿ ಪತ್ರಿಕಾ ಗೋಷ್ಠಿ‌ ನಡೆಸಿ ಬಿಜೆಪಿ ಪಕ್ಷ ಭೋವಿ ಸಮುದಾಯಕ್ಕೆ ಅನ್ಯಾಯ ಮಾಡಿಕೊಂಡು ಬಂದಿದ್ದು, ಈ‌ ಬಾರಿ ನಮ್ಮ ಸಮುದಾಯಕ್ಕೆ ಕೊಡಬೇಕೆಂದು ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಇಮ್ಮಡಿ‌ ಸಿದ್ದರಾಮೇಶ್ವರ ಶ್ರೀಗಳು ಒತ್ತಾಯಿಸಿದ್ದರು. ಇದರ ಬೆನ್ನೆಲ್ಲೆ ಶಿವಮೊಗ್ಗಾದ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ, ಮಠಕ್ಕೆ ಭೇಟಿ‌ ಕೊಟ್ಟಾಗಲೂ ಧೀರ್ಘ ಚರ್ಚೆ ನಡೆದಿತ್ತು. ಬಿಜೆಪಿಯ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ಚಂದ್ರಪ್ಪ ಅವರು ಕೂಡ ಮಗನಿಗೆ ಟಿಕೆಟ್ ಕೊಡುವಂತೆ ಯಡಿಯೂರಪ್ಪ ಮೇಲೆ ಒತ್ತಡ ತಂದಿದ್ದರು. ಇತ್ತ ರಘುಚಂದನ್ ದೆಹಲಿಯ ಬಿಜೆಪಿ ಹಾಗೂ ನಾಗಪುರದ ಆರ್ ಎಸ್ ಎಸ್ ನ ಮುಖಂಡರ ಜೊತೆ ನಿರಂತರ ಸಂಪರ್ಕ ಹೊಂದಿದ್ದು, ಟಿಕೆಟ್ ಗಾಗಿ ಮನವಿ ಮಾಡಿದ್ದರು. ಅಂತಿಮವಾಗಿ ಕಾರಜೋಳ ಹಾಗೂ ರಘುಚಂದನ್ ಅವರ ಹೆಸರುಗಳು ಚರ್ಚೆಯಾಗಿದ್ದು, ಪಕ್ಷ ಮತ್ತೊಮ್ಮೆ ಕ್ಷೇತ್ರದ ಸರ್ವೆ ನಡೆಸಿದ್ದು, ಅದರ ಆಧಾರದ ಮೇಲೆ ಟಿಕೆಟ್ ನ್ನು ರಘುಚಂದನ್ ಗೆ ನೀಡಬೇಕೆ ಬೇಡವೆ ಎಂಬ ಬಗ್ಗೆ ದೆಹಲಿಯಲ್ಲಿ ಚರ್ಚೆ ನಡೆಯುತ್ತಿದ್ದು, ಅಂತಿಮ ಕ್ಷಣದಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪ ಪುತ್ರ ರಘುಚಂದನ್ ಗೆ ಟಿಕೆಟ್ ಸಿಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದು, ಸಂಜೆಯೊಳಗೆ ಟಿಕೆಟ್ ಫೈನಲ್ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

 

 

 

Leave a Reply

Your email address will not be published. Required fields are marked *