ದೇಶದಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಬೇಕಿದೆ

ದೇಶ

ಚಿತ್ರದುರ್ಗ: ಪ್ರಜಾಪ್ರಭುತ್ವ ಸಂವಿಧಾನ ಆಪತ್ತಿನಲ್ಲಿದೆ. ಬಹುತ್ವ ಭಾರತವನ್ನು ರಕ್ಷಿಸಬೇಕಾಗಿರುವುದರಿಂದ ಭಾರತ್ ಜೋಡೋ ಪಾದಯಾತ್ರೆಗೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಪ್ಪ ಮನವಿ ಮಾಡಿದರು.
ರಾಹುಲ್‍ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೊರಟಿರುವ ಭಾರತ್ ಜೋಡೊ ಪಾದಯಾತ್ರೆಗೆ ಸಂಬಂಧಿಸಿದಂತೆ ಭಾರತ ಜೋಡಿಸುವ ಯಾತ್ರಾ ಭಾವೈಕ್ಯ ಕರ್ನಾಟಕದ ಆಶಯವನ್ನಿಟ್ಟಿಕೊಂಡು ಜನಪರ ಹೋರಾಟಗಾರರು, ಸಾಹಿತಿಗಳು, ಚಳುವಳಿಗಾರರು, ಪ್ರಗತಿಪರರು ಜೊತೆಗೂಡಿ ಐಶ್ವರ್ಯಫೋರ್ಟ್‍ನಲ್ಲಿ ಭಾನುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ, ಸಂವಿಧಾನವನ್ನು ಕೋಮುವಾದಿಗಳಿಂದ ರಕ್ಷಿಸಬೇಕಾಗಿರುವುದರಿಂದ ಬೀದಿಗಿಳಿದಿದ್ದೇವೆ. ಇಲ್ಲದಿದ್ದರೆ ಮುಂದಿನ ಪೀಳಿಗೆ ಪರಿತಪಿಸಬೇಕಾಗುತ್ತದೆ. ಮೌನವಾಗಿರುವುದು ದೇಶದ್ರೋಹದ ಕೆಲಸವಿದ್ದಂತೆ. ಹಾಗಾಗಿ ಬರವಣಿಗೆ ಮೂಲಕ ಕೋಮುವಾದವನ್ನು ವಿರೋಧಿಸುತ್ತಿರುವುದರಿಂದ ನನಗೆ ಸಾಕಷ್ಟು ಬೆದರಿಕೆಗಳು ಬಂದಿವೆ. ಅವಕ್ಕೆಲ್ಲಾ ನಾನು ಹೆದರುವವನಲ್ಲ. ರಾಹುಲ್‍ಗಾಂಧಿರವರ ಭಾರತ್ ಜೋಡೋ ಪಾದಯಾತ್ರೆಗೆ ನಾವುಗಳು ಕೈಜೋಡಿಸುತ್ತೇವೆ. ಇದು ಮುಂದಿನ ಪೀಳಿಗೆಗೆ ಉತ್ತರದಾಯಿತ್ವದ ಹೆಜ್ಜೆ ಎಂದು ಹೇಳಿದರು.
ದೇಶದಲ್ಲಿ ಹಿಂದೆ ನಡೆದ ರಥಯಾತ್ರೆಗೆ ಕೋಮುಸ್ಪರ್ಶವಿದೆ. ಈಗಿನ ಭಾರತ್ ಜೋಡೋಯಾತ್ರೆಗೆ ಎಲ್ಲಾ ಜಾತಿ ಧರ್ಮದವರನ್ನು ಒಂದುಗೂಡಿಸುವ ಬಹುತ್ವವಿದೆ. ಪ್ರಧಾನಿ ನರೇಂದ್ರಮೋದಿ ಅಧಿಕಾರಕ್ಕೆ ಬಂದು ಏಳು ವರ್ಷಗಳಾಗಿದೆ ದೇಶದ ಜನರಿಗೆ ನೀಡಿದ ಯಾವ ಭರವಸೆಯೂ ಈಡೇರಿಲ್ಲ. ನಿರುದ್ಯೋಗ ಉಲ್ಬಣಗೊಂಡಿದೆ. ಸುಳ್ಳೆ ಅವರ ಮನೆದೇವರು. ಕೋಮುವಾದಿಯನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯದಿದ್ದರೆ ಪ್ರಜಾಪ್ರಭುತ್ವ ಹಾಳಾಗುತ್ತದೆ. ಮನುವಾದದ ಮೂಲಕ ಸಮಾಜವನ್ನು ಛಿದ್ರಗೊಳಿಸಲು ಬಿಡಬಾರದು. ಬಡವರ ಬದುಕು ಭಾರವಾಗಿದೆ. ಶ್ರೀಮಂತರನ್ನು ಬೆಳೆಸುವ ಸರ್ಕಾರ ನಮಗೆ ಬೇಡ. ರಾಹುಲ್‍ಗಾಂಧಿ ದೇಶದ ಯುವಕರು, ನಿರುದ್ಯೋಗಿಗಳು, ಮಹಿಳೆಯರು, ಕಾರ್ಮಿಕರು, ರೈತರ ಮನಸ್ಸನ್ನು ಅರ್ಥಮಾಡಿಕೊಂಡು ಬೆಳೆಯುತ್ತಿರುವ ರಾಜಕಾರಣಿ ಎಂಬುದು ನಮಗೆ ಮನದಟ್ಟಾಗಿದೆ ಎಂದು ತಿಳಿಸಿದರು.
ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ಮಾತನಾಡಿ ಕೋಮುವಾದಿ ಬಿಜೆಪಿ.ಯವರ ಒಡೆದಾಳುವ ರಾಜಕಾರಣದಿಂದ ದೇಶದಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಬೇಕಿದೆ. ರಾಹುಲ್‍ಗಾಂಧಿರವರ ಭಾರತ್ ಜೋಡೋ ಐಕ್ಯತಾ ಯಾತ್ರೆ ತುಂಬಾ ಒಳ್ಳೆಯ ಕಾರ್ಯಕ್ರಮ. ರಾಷ್ಟ್ರದ 200 ಸಂಘಟನೆಗಳು ಸಭೆ ನಡೆಸಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿವೆ. ಜನತಂತ್ರದಲ್ಲಿ ನಂಬಿಕೆಯಿರುವ ಎಲ್ಲಾ ಸಂಘಟನೆಗಳು ಇದರಲ್ಲಿ ಭಾಗವಹಿಸಲಿವೆ. ಕಳೆದ ತಿಂಗಳ 29 ರಂದು ಸಾಹಿತಿಗಳು, ಕಲಾವಿದರು, ಚಿಂತಕರು, ಹೋರಾಟಗಾರರು, ತಜ್ಞರು ಬೆಂಗಳೂರಿನಲ್ಲಿ ಸಭೆ ನಡೆಸಿ ಐಕ್ಯತಾ ಯಾತ್ರೆಗೆ ಬೆಂಬಲಿಸಲು ತೀರ್ಮಾನಿಸಿದೆವು. ಅನ್ಯಾಯ, ಭ್ರಷ್ಟಾಚಾರವನ್ನು ಟೀಕಿಸುವ ಸ್ವಾತಂತ್ರ್ಯ ಕೈತಪ್ಪುತ್ತಿರುವುದರಿಂದ ಜನತಂತ್ರವನ್ನು ಸರಿದಾರಿಗೆ ತರಬೇಕಿದೆ ಎಂದು ಹೇಳಿದರು.
ತೇಜಸ್ವಿ ವಿ.ಪಟೇಲ್ ಮಾತನಾಡುತ್ತ ಸಾಮರಸ್ಯಕ್ಕೆ ಧಕ್ಕೆ ಬರುತ್ತಿರುವಾಗ ಎಚ್ಚೆತ್ತುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ದೇಶದ ಪ್ರಧಾನಿ ಮೋದಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಹತ್ತು ಹಲವಾರು ವಿಚಾರಗಳನ್ನು ದೇಶದ ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿರುವುದರಿಂದ ರಾಹುಲ್‍ಗಾಂಧಿ ಭಾರತ್ ಜೋಡೋ ಐಕ್ಯತಾ ಯಾತ್ರೆ ಕೈಗೊಂಡಿರುವುದರಲ್ಲಿ ನಾವುಗಳು ಭಾಗವಹಿಸುತ್ತೇವೆಂದರು.
ಕರ್ನಾಟಕ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಸಂಘದ ಅಧ್ಯಕ್ಷ ರವೀಂದ್ರನಾಯ್ಕ ಮಾತನಾಡಿ ನೂರಕ್ಕೂ ಹೆಚ್ಚು ಹೋರಾಟಗಾರರು ಭಾರತ್ ಜೋಡೋ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ಸಂವಿಧಾನ ಸಡಿಲಿಕೆಯಾಗುತ್ತಿದೆ. ಕಾರ್ಮಿಕರು, ರೈತರಿಗೆ ಮಾರಕವಾದ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಸಾಮಾಜಿಕ ಜಾಗೃತಿಯಾಗಬೇಕೆಂದು ನುಡಿದರು.
ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ ಜನತಂತ್ರದ ಮಾರಣ ಹೋಮವಾಗುತ್ತಿದೆ. ಮನುವಾದಿ ಕೋವಿಡ್‍ಗಿಂತಲು ಅಪಾಯಕಾರಿ. ವೇಗವಾಗಿ ಹಬ್ಬುತ್ತಿದೆ. ರಾಜಕೀಯ ಪಕ್ಷವನ್ನು ಮೀರಿ ಜನಮುಖಿ ಚಿಂತಕರು, ಹೋರಾಟಗಾರು, ಸಾಹಿತಿಗಳು, ಕಲಾವಿದರು ಪ್ರತಿಯೊಬ್ಬರು ಭಾರತ್‍ಜೋಡೋ ಐಕ್ಯತಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆಂದು ತಿಳಿಸಿದರು.
ಪ್ರೊ.ರಾಜಶೇಖರಯ್ಯ ಮಾತನಾಡುತ್ತ ಅಂಬೇಡ್ಕರ್ ಕಷ್ಟಪಟ್ಟು ರಚಿಸಿರುವ ಸಂವಿಧಾನ ಮಾಯವಾಗುತ್ತಿದೆ. ಇಲ್ಲಿ ಯಾವುದೇ ಪಕ್ಷ ಮುಖ್ಯವಲ್ಲ. ದೇಶದ ಹಿತಕ್ಕಾಗಿ ಯಾರು ಹೋರಾಟಕ್ಕೆ ಇಳಿಯುತ್ತಾರೋ ಅಂತಹವರಿಗೆ ನಾವುಗಳು ಕೈಜೋಡಿಸುತ್ತೇವೆ. ಸಂವಿಧಾನ ಅಲುಗಾಡುತ್ತಿರುವುದರಿಂದ ಪಕ್ಷಾತೀತವಾಗಿ ಪ್ರತಿಯೊಬ್ಬರು ಭಾರತ್ ಜೋಡೋ ಐಕ್ಯತಾ ಯಾತ್ರೆಗೆ ಕೈಜೋಡಿಸುವಂತೆ ವಿನಂತಿಸಿದರು.
ನಿವೃತ್ತ ಪ್ರಾಚಾರ್ಯರಾದ ಜೆ.ಯಾದವರೆಡ್ಡಿ ಮಾತನಾಡಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ, ಗೌರವ ಇವರು ಎಲ್ಲರೂ ರಾಹುಲ್‍ಗಾಂಧಿರವರ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಬೇಕಿದೆ. ದೇಶದಲ್ಲಿ ಶಾಂತಿ ಸೌಹಾರ್ಧತೆಗೆ ಬಿಜೆಪಿ.ಯವರು ಬೆಂಕಿಯಿಡುತ್ತಿದ್ದಾರೆ. ಇದೊಂದು ಜನಮುಖಿ ಯಾತ್ರೆಯಾಗಿರುವುದರಿಂದ ಎಲ್ಲರ ಬೆಂಬಲ ಬೇಕು ಎಂದರು.ದುರ್ಗಪ್ಪ, ಕಾಂಗ್ರೆಸ್ ಮುಖಂಡ ಮೆಹಬೂಬ್‍ಪಾಷ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಶಶಾಂಕ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು

 

 

 

Leave a Reply

Your email address will not be published. Required fields are marked *