ಬಿತ್ತನೆ ಬೀಜದ ಗುಣಮಟ್ಟ ಖಾತ್ರಿ ಪಡಿಸಿಕೊಂಡು ರೈತರಿಗೆ ವಿತರಿಸಲು ಸೂಚನೆ

ಜಿಲ್ಲಾ ಸುದ್ದಿ

ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ ರೈತರು ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಬಿತ್ತನೆ ಬೀಜದ ಗುಣಮಟ್ಟ ಖಾತ್ರಿ ಪಡಿಸಿಕೊಂಡು ರೈತರಿಗೆ ವಿತರಿಸಬೇಕು. ಕಳಪೆ ಬೀಜ ಮತ್ತು ಗೊಬ್ಬರ ಮಾರಾಟವಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಪ್ರಸಕ್ತ ಮುಂಗಾರು ಹಂಗಾಮು ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜು ಸಿದ್ಧತೆ ಕುರಿತು ಕೃಷಿ, ತೋಟಗಾರಿಕೆ, ಬೀಜ ನಿಗಮ, ಎಣ್ಣೆ ಕಾಳು ಅಭಿವೃದ್ಧಿ ನಿಗಮ, ರಸಗೊಬ್ಬರ ಪೂರೈಕೆದಾರರು ಹಾಗೂ ರೈತರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಕೃಷಿ ಆಧಾರಿತ ಜಿಲ್ಲೆಯಾಗಿದೆ. ಸಣ್ಣ ಹಾಗೂ ಅತಿಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರೈತರಿಗೆ ಸಮಯಕ್ಕೆ ತಕ್ಕಂತೆ ಬೀಜ ಮತ್ತು ಗೊಬ್ಬರ, ಕೀಟನಾಶಕ ಸೇರಿದಂತೆ ಸಾಮಗ್ರಿಗಳು ದೊರಕುವಂತೆ ಮಾಡಬೇಕು ಎಂದರು.
ಬಿತ್ತನೆ ಶೇಂಗಾ ಬೀಜ ದರ ಇಳಿಗೆ ಶಿಫಾರಸ್ಸು : ಕಳೆದ ಬಾರಿ ಕೆ.ಒ.ಎಫ್ (ಕರ್ನಾಟಕ ಎಣ್ಣೆಕಾಳು ಬೆಳಗಾರರ ಸಹಕಾರಿ ಒಕ್ಕೂಟ ನಿಯಮಿತ) ವಿತರಿಸಿದ ಬಿತ್ತನೆ ಶೇಂಗಾ ಬೀಜದಲ್ಲಿ ಕಳಪೆ ಕಂಡುಬಂದಿತ್ತು. ಕೆ.ಒ.ಎಫ್ ಮಾರುಕಟ್ಟೆ ದರಕ್ಕಿಂತ ಅಧಿಕವಾಗಿ ಬಿತ್ತನೆ ಬೀಜದ ದರ ನಿಗದಿ ಪಡಿಸಿದೆ. ಮಾರುಕಟ್ಟೆಯಲ್ಲಿ ರೂ. 5 ರಿಂದ 6 ಸಾವಿರಕ್ಕೆ ದೊರೆಯುವ ಬಿತ್ತನೆ ಶೇಂಗಾ ಬೀಜಕ್ಕೆ ಕೆ.ಒ.ಎಫ್ ರೂ. 9 ಸಾವಿರ ದರ ನಿಗದಿ ಮಾಡಿದೆ ಎಂದು ಸಭೆಯಲ್ಲಿ ರೈತರು ತಿಳಿಸಿದರು.
ಬಿತ್ತನೆ ಶೇಂಗಾ ಬೀಜದ ದರವನ್ನು ಕೃಷಿ ಇಲಾಖೆಯ ಆಯುಕ್ತಾಲಯದಲ್ಲಿ ರಾಜ್ಯಮಟ್ಟಕ್ಕೆ ಅನ್ವಯಿಸುವಂತೆ ದರ ನಿಗದಿ ಮಾಡಿ ಟೆಂಡರ್ ಕರೆಯಲಾಗುತ್ತದೆ.  ಈ ಬಾರಿ ಪ್ರತಿ ಕೆ.ಜಿ.84 ರೂಪಾಯಿಗಳನ್ನು ಇಲಾಖೆ ನಿಗದಿ ಮಾಡಿದೆ. ಇದರಂತೆ 100 ಬಿತ್ತನೆ ಶೇಂಗಾ ಬೀಜದ ದರ ರೂ.8400/- ಆಗಿದೆ. ಇದರಲ್ಲಿ ಕೆ.ಒ.ಎಫ್, ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ಖಾಸಗಿ ಕಂಪನಿಗಳು ಬಿತ್ತನೆ ಶೇಂಗಾ ಬೀಜದ ವಿತರಣೆಗೆ ಟೆಂಡರ್ ಪಡೆದುಕೊಂಡಿವೆ. ಇದರಲ್ಲಿ ಜಿಲ್ಲೆಗೆ ಅಗತ್ಯ ಇರುವ ಶೇ.70 ಹೆಚ್ಚಿನ ಶೇಂಗಾ ಬಿತ್ತನೆ ಬೀಜವನ್ನು ಕೆ.ಒ.ಎಫ್ ಸರಬರಾಜು ಮಾಡುತ್ತದೆ. ರಾಜ್ಯ ಸರ್ಕಾರದಿಂದ ಪ್ರತಿ ಕ್ವಿಂಟಾಲ್ ಬಿತ್ತನೆ ಶೇಂಗಾ ಬೀಜ ಖರೀದಿಗೆ ಸಾಮಾನ್ಯ ರೈತರಿಗೆ ರೂ.1400/- ಹಾಗೂ ಎಸ್.ಸಿ ಹಾಗೂ ಎಸ್.ಟಿ ರೈತರಿಗೆ ರೂ.2000/- ಸಬ್ಸಡಿ ನೀಡಲಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶ್‍ಕುಮಾರ್ ಸಭೆಗೆ ಮಾಹಿತಿ ನೀಡಿದರು.
ಕೆ.ಒ.ಎಫ್ ಸಂಸ್ಥೆಯ ಬಿತ್ತನೆ ಶೇಂಗಾ ಬೀಜದ ಗುಣಮಟ್ಟದ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಬೇಕು. ಕೃಷಿ ಇಲಾಖೆಯಿಂದ ಕೆ.ಒ.ಎಫ್ ಸಂಸ್ಥೆಯ ಬೀಜ ಸಂಸ್ಕರಣ ಘಟಕ್ಕೆ ಮೇಲ್ವಿಚಾರಕರನ್ನು ನೇಮಿಸಬೇಕು. ಗುಣಮಟ್ಟವಲ್ಲದ ಬೀಜಗಳು ಕಂಡು ಬಂದರೆ ತಕ್ಷಣೆ ಕ್ರಮ ಕೈಗೊಳ್ಳಬೇಕು. ರೈತರ ಅಭಿಪ್ರಾಯದಂತೆ ಮಾರುಕಟ್ಟೆಯಲ್ಲಿ ರೂ. 5000/- ದಿಂದ ರೂ.5500/- ದರಕ್ಕೆ ಉತ್ತಮ ಗುಣಮಟ್ಟದ ಶೇಂಗಾ ಬೀಜ ದೊರೆಯುತ್ತಿವೆ. ಆದ್ದರಿಂದ ಕೆ.ಒ.ಎಫ್ ಬಿತ್ತನೆ ಬೀಜ ದರವನ್ನು ರೂ.6500/- ನಿಗದಿ ಮಾಡಿ, ಸಬ್ಸಿಡಿ ಸೌಲಭ್ಯ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ನಕಲಿ ಹಾಗೂ ಹೆಚ್ಚಿನ ದರಕ್ಕ ಗೊಬ್ಬರ ಮಾರಾಟ ಮಾಡುವುದು ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಬೇಕು. ರೈತರು ಕೇಳುವ ಗೊಬ್ಬರಗಳನ್ನು ಮಾತ್ರ ನೀಡಬೇಕು. ಯಾವುದೇ ರೀತಿಯಲ್ಲಿ ಇತರೆ ಗೊಬ್ಬರನ್ನು ಕೊಳ್ಳುವಂತೆ ಒತ್ತಾಯ ಮಾಡಬಾರದು. ಜಿಲ್ಲೆಯಲ್ಲಿ ಇರುವ ರೈತ ಉತ್ಪಾದಕ ಸಂಘಗಳು, ವ್ಯವಸಾಯೋತ್ಪನ್ನ ಸಹಕಾರಿ ಸಂಘಗಳ ಮೂಲಕ ಗೊಬ್ಬರಗಳ ವಿತರಣೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಪ್ಪು ತಲೆ ಹುಳಿವಿನ ತಡೆಗೆ ಕಾರ್ಯಗಾರ: ಜಿಲ್ಲೆಯ ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ ತೆಂಗು ಬೆಳೆಯಲ್ಲಿ ಕಂಡುಬಂದಿರುವ ಕಪ್ಪು ತಲೆಯ ಕಂಬಳಿ ಹುಳುವಿನ ಬಾದೆಯಿಂದಾಗಿ ತೆಂಗು ಬೆಳೆ ನಶಿಸಿಹೊಗುತ್ತಿದೆ. ಈ ಹುಳುವಿನ ಬಾದೆ ತಡೆಯಲು ರೈತರು ಸಾಮೂಹಿಕವಾಗಿ ಪ್ರಯತ್ನಿಸಬೇಕು. ಆದರಿಂದ ಈ ಹುಳುವಿನ ಬಾದೆ ಹೆಚ್ಚಿರುವ ಪ್ರದೇಶಗಳಲ್ಲಿ ಕೃಷಿ ಹಾಗೂ ಕೀಟ ವಿಜ್ಞಾನಿಗಳ ಕಾರ್ಯಗಾರನ್ನು ನಡೆಸಿ, ರೈತರಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರ್ಯಗಾರಗಳ ಪಟ್ಟಿಯನ್ನು ದಿನಪತ್ರಿಕೆ ಹಾಗೂ ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ನಡೆಸಿ, ಹೆಚ್ಚು ರೈತರಗೆ ತಲುಪುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೊಸದುರ್ಗ ಹಾಗೂ ಹೊಳಲ್ಕೆರೆ ಭಾಗದಲ್ಲಿ ಸುಮಾರು 10 ಸಾವಿರ ಎಕರೆ ಪ್ರದೇಶ ತೆಂಗು ಬೆಳೆಯಲ್ಲಿ ಕಪ್ಪು ತಲೆಯ ಹುಳುವಿನ ಬಾದೆ ಕಂಡುಬಂದಿದೆ. ತೋಟಗಾರಿಕೆ ಇಲಾಖೆಯಿಂದ ಈಗಾಗಲೇ ಹಾನಿಪ್ರದೇಶದ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಕಳೆದ ವರ್ಷ 15 ಕಾರ್ಯಗಾರಗಳನ್ನು ಆಯೋಜಿಸಿ, ರೈತರಿಗೆ ತಿಳುವಳಿಕೆ ನೀಡಲಾಗಿದೆ. ಬಿಸಿಲು ಹೆಚ್ಚಾದ ಕಾರಣದಿಂದ ಹುಳಿವಿನ ಬಾದೆಯು ಹೆಚ್ಚಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್ ಕುಮಾರ್ ಮಾತನಾಡಿ,ವ ಮೇ ತಿಂಗಳಿನಲ್ಲಿ ಜಿಲ್ಲೆಯ ವಾಡಿಕೆ ಮಳೆ 118 ಮಿ.ಮೀ ಆಗಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.56 ಮಳೆ ಕೊರತೆಯಾಗಿದೆ. ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಎಳ್ಳು,ಹೆಸರು, ಉದ್ದು ಬೆಳ ನಾಶವಾಗಿದೆ. ಕಳೆವ ವರ್ಷ ಮೇ ತಿಂಗಳ ವೇಳೆಗೆ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂಬರುವ ದಿನಗಳಲ್ಲಿ ವಾಡಿಕೆ ಮಳೆಯಾಗಲಿದೆ. ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಂಗಹ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ 40 ಸಾವಿರ ಮೆಟ್ರಿಕ್ ಟನ್ ರಷ್ಟು ಗೊಬ್ಬರ ಅಗತ್ಯವಿದ್ದು ಈಗಾಗಲೇ 20 ಸಾವಿರ ಮೆಟ್ರಿಕ್ ಟನ್ ರಷ್ಟು ಸಂಗ್ರಹ ಮಾಡಿಕೊಳ್ಳಲಾಗಿದೆ ಎಂದರು.
ಕೃಷಿ ಇಲಾಖೆ ಸಾಮಾಜಿಕ ಅರಣ್ಯ ಯೋಜನೆಯಡಿ ಹಾಗೂ ನರೇಗಾ ಕಾಮಗಾರಿಯಡಿ ರೈತರು ತೇಗ, ಹುಣಸೆ, ಸಿಲ್ವರ್, ಮಹಾಗೋನಿ ಮರಗಳನ್ನು ನಡೆಸಲು ಉಚಿತವಾಗಿ ಗಿಡಗಳನ್ನು ನೀಡಲಾಗುವುದು ರೈತರು ಇದರ ಲಾಭ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಪಿ. ರಮೇಶ್ ಕುಮಾರ್ ತಿಳಿಸಿದರು.
ಆಯಾ ಆಯಾ ತಾಲ್ಲೂಕಿನ ವಿವಿಧ ಬೆಳೆಗಳ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿ ತಮ್ಮ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗೆ ರೈತ ಮುಖಂಡರು ಮನವಿ ಮಾಡಿದರು.
ಸಭೆಯಲ್ಲಿ ರೈತ ಮುಂಖಡರು, ಕೃಷಿ, ತೋಟಗಾರಿಕೆ, ಸಹಕಾರ ಇಲಾಖೆ, ಕೆಒಎಫ್, ಬೀಜ ನಿಗಮದ ಅಧಿಕಾರಿಗಳು ಇದ್ದರು.

 

 

 

Leave a Reply

Your email address will not be published. Required fields are marked *