ಬಾರೆ ಮುಳ್ಳಿನ ಶಿಖರವೇರಿ ಕಳಸ ಕಿತ್ತು ಶೌರ್ಯ ಮೆರೆದ ಚೌಳೂರು ಯುವಕ

ರಾಜ್ಯ

ಬಾರೆ ಮುಳ್ಳಿನ ಶಿಖರವೇರಿ ಕಳಸ ಕಿತ್ತು ಶೌರ್ಯ ಮೆರೆದ ಚೌಳೂರು ಯುವಕ

 

 

 

 

ಇತ್ತೀಚಿನ ದಿನಗಳಲ್ಲಿ ಆಧುನಿಕ ಬೆಳೆದಂತೆ ಸಾಂಪ್ರದಾಯಿಕ ಆಚರಣೆಗಳು ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತವೆ.
ಆದರೆ ಇಲ್ಲೊಂದು ಬುಡಕಟ್ಟು ಸಮುದಾಯವೆಂದೇ ಗುರುತಿಸಿಕೊಂಡಿರುವ ಕಾಡುಗೊಲ್ಲರು ಮಾತ್ರ ಸಾಂಪ್ರದಾಯಿಕ ಆಚರಣೆಗಳನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡು ಬರುವ ಮೂಲಕ ಜನಪದ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ.
ಸದ್ಯ ಇದೇ ರೀತಿಯ ಬುಡಕಟ್ಟು ಸಮುದಾಯದ ಜಾತ್ರೆಯೊಂದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪೂರ್ಲಹಳ್ಳಿಯ ವಸಲುದಿಬ್ಬದಲ್ಲಿ ಕಾಡುಗೊಲ್ಲರು ತಮ್ಮ ಆರಾಧ್ಯ ದೈವ ಕ್ಯಾತೆದೇವರ ಬರಿ ಕಾಲಲ್ಲಿ ಕಳಸ ಕೀಳುವ ಮುಳ್ಳಿನ ಜಾತ್ರೆ ಅದ್ದೂರಿಯಾಗಿ ನೆರವೇರಿತು. ಐದು ಜನ ಈರಗಾರರು ಕಳಶ ಕೀಳುವ ಪೈಪೋಟಿಯಲ್ಲಿ ತೊಡಗುತ್ತಾರೆ. ಈ ಬಾರಿ ಚೌಳೂರು ರವಿ ಎಂಬ ಈರಗಾರ ಕಳಶ ಕೀತ್ತು ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಕೋಣನ ಗೊಲ್ಲರು ಮತ್ತು ಬೊಮ್ಮನ ಗೊಲ್ಲರು ಸೇರಿದಂತೆ 13 ಗುಡಿಕಟ್ಟಿನ ದೇವರುಗಳು ಈ ಮುಳ್ಳಿನ ಗುಡಿಯಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಬರೀ ಕಾಲಲ್ಲಿ ಮುಳ್ಳಿನ ಗುಡಿಯನ್ನು ಪರಸ್ಪರ ಪೈಪೋಟಿಯಲ್ಲಿ ನಿರ್ಮಿಸುತ್ತಾರೆ. ಅರ್ಧ ಗುಡಿಯನ್ನು ಕೋಣನ ಗೊಲ್ಲರು ಉಳಿದರ್ಧ ಗುಡಿಯನ್ನು ಬೊಮ್ಮನ ಗೊಲ್ಲರು ಗುಡಿಯನ್ನು ನಿರ್ಮಿಸುವುದು ವಿಶೇಷವಾಗಿರುತ್ತದೆ.
15 ದಿನಗಳ ಕಾಲ ನಡೆಯುವ ಜಾತ್ರೆ ಇದಾಗಿದ್ದು, ಈ ಜಾತ್ರೆಗೆ 10 ದಿನಗಳ ಮುಂಚೆಯೇ ಭಕ್ತರೊಬ್ಬರ ಜಮೀನಿನಲ್ಲಿ ಬೆಳೆದ ಹತ್ತಿ ಮರವನ್ನು ಪೂಜಿಸಿ, ಅದನ್ನು ಕಡಿದು ವಸಲುದಿಬ್ಬಕ್ಕೆ ತರುತ್ತಾರೆ. ನಂತರ ಕ್ಯಾತೆದೇವರ ಜಾತ್ರೆಗೆ ಬಂದ್ರೆಕಳ್ಳೆ, ಬಾರೆ ಕಳ್ಳೆಯನ್ನು ಕಡಿದು ತಂದು 15 ಅಡಿ ಅಗಲ ಮತ್ತು 20 ಅಡಿ ಎತ್ತರದ ಮುಳ್ಳಿನ ದೇವರ ಗುಡಿಯನ್ನು ನಿರ್ಮಾಣ ಮಾಡುತ್ತಾರೆ. ಹೀಗೆ ನಿರ್ಮಿಸಿದ ಗುಡಿಯಲ್ಲಿ ಚನ್ನಮ್ಮ ನಾಗತಿಹಳ್ಳಿಯ ಕ್ಯಾತೆದೇವರು, ಬಂಜಗೆರೆ ಈರಣ್ಣ, ಐಗಾರ್ಲಹಳ್ಳಿಯ ತಾಳಿ ದೇವರನ್ನ ಪ್ರತಿಷ್ಠಾಪಿಸುತ್ತಾರೆ.
ಹೀಗೆ ಕಾಡುಗೊಲ್ಲ ಸಮುದಾಯದವರು ಭಕ್ತಿಯಿಂದ ಮುಳ್ಳಿನ ಗುಡಿಯನ್ನು ನಿರ್ಮಿಸಿದ ನಂತರ ಗೋಪುರದ ತುದಿಯಲ್ಲಿ ಕಂಚಿನ ಕಳಶವನ್ನು ಪ್ರತಿಷ್ಠಾಪಿಸಿ ನಂತರ ಬರಿ ಕಾಲಲ್ಲಿ ಆ ಕಳಶವನ್ನು ಕೀತ್ತು ಕುಣಿದಾಡುವ ಜಾತ್ರೆ ಇದಾಗಿರುತ್ತದೆ.
ಕ್ಯಾತೆದೇವರಿಗೆ ಸೇರಿದ 13 ಗುಡಿಕಟ್ಟಿನಅಣ್ಣ-ತಮ್ಮಂದಿರು ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಾರೆ. ಈ ಕಾಡುಗೊಲ್ಲ ಸಮುದಾಯವು ಒಂದು ತಿಂಗಳ ಕಾಲ “ನವಣೆ” ವ್ರತ ಆಚರಿಸುತ್ತಾರೆ. ಏಕೆಂದರೆ ಕ್ಯಾತೆ ದೇವರು ಕಾಡುಗೊಲ್ಲರಿಗೆ ಒಲಿಯುವ ಮುನ್ನ ಹೇಮರೆಡ್ಡಿ ಮತ್ತು ಭೀಮರೆಡ್ಡಿ ಗೌಡನಿಗೆ ಒಲಿದಿರುತ್ತದೆ. ಆದರೆ ರೆಡ್ಡಿ ಅವರು ನಿರ್ಲಕ್ಷ ತೋರಿ ಮನೆಯ ದೇವರನ್ನು “ಹುರುಳಿ – ನವಣೆ” ಕಣಜದಲ್ಲಿ ಮುಚ್ಚಿ ಹಾಕಿದ್ದನಂತೆ, ಹೀಗಾಗಿ ರೆಡ್ಡಿ ದುರಹಂಕಾರದಿಂದ ಕ್ಯಾತೆದೇವರು ರೆಡ್ಡಿಗರ ಮನೆಯಲ್ಲಿ ಪಶುಪಾಲಕ ನಾಗಿದ್ದ ಕಾಡುಗೊಲ್ಲರ ಬೊಮ್ಮಲಿಂಗಎಂಬುವನಿಗೆ ಒಲಿದಿದೆ ಎಂಬ ಪ್ರತೀತಿ ಇದೆ.ಹೀಗಾಗಿ ಕಾಡುಗೊಲ್ಲ ಸಮುದಾಯದವರು ದೇವರಿಗಾಗಿ ನವಣೆ ಮತ್ತು ಹುರುಳಿಯನ್ನು ಒಂದು ತಿಂಗಳ ಕಾಲ ಸೇವಿಸುವುದಿಲ್ಲ, ಅಂತೆಯೇ ಹುರಳಿ ಮತ್ತು ನವಣೆ ಧಾನ್ಯವನ್ನು ಬೆಳೆಯುವ ಹೊಲಗಳಲ್ಲಿ ಕೂಡ ಹೋಗದೆ ಕಟ್ಟು ನಿಟ್ಟಿನ ವ್ರತಪಾಲಿಸುತ್ತಾರೆ. ಬರೀ ಕಾಲಲ್ಲಿ ಬಾರೆ ಮುಳ್ಳಿನ ಗುಡಿ ನಿರ್ಮಿಸಿ, ಅರೆ ಬೆತ್ತಲೆಯಲ್ಲಿ ಕಳಶ ಕೀಳುವ ಮೂಲಕ ಬುಡಕಟ್ಟುಸಮುದಾಯದ ವಂಶಸ್ಥರು ” ಶೌರ್ಯ ” ಮೆರೆಯುತ್ತಾರೆ. ಈ ಆಚರಣೆಯಿಂದಾಗಿ ಈ ನಾಡಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿದೆ. ಬರೀ ಮೈಯಲ್ಲಿ ಮುಳ್ಳಿನ ಗೋಪುರ ಕಟ್ಟುವುದು ಮತ್ತು ಕಳಶ ಕೀಳುವ ದೃಶ್ಯ ಸುತ್ತಮುತ್ತ ನೆರೆದಿರುವ ಭಕ್ತ ಸಮೂಹವನ್ನು ಒಂದು ಕ್ಷಣ ರೋಮಾಂಚನ ಗೊಳಿಸುತ್ತದೆ.ಇನ್ನು ಈ ದೃಶ್ಯವನ್ನು ಕಣ್ತುಂಬಿ ಕೊಳ್ಳಲು ಕರ್ನಾಟಕದ ನೆರೆಹೊರೆಯ ರಾಜ್ಯಗಳಾದಆಂಧ್ರಪ್ರದೇಶ, ತಮಿಳು ನಾಡು, ಸೀಮಾಂದ್ರ,ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಸುತ್ತಮುತ್ತಲಿನ ಭಕ್ತರು ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದು ಪುಳಕೀತ ರಾಗುತ್ತಾರೆ.ಒಟ್ಟಾರೆಯಾಗಿ ಈ ಜಾತ್ರೆಯು ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಟ್ಟರೆ ಬೇರೆಲ್ಲಿ ನಡೆಯುವುದಿಲ್ಲ ಎನ್ನಬಹುದಾಗಿದೆ. ಕಾಲಿಗೆ ಒಂದು ಮುಳ್ಳು ಚುಚ್ಚಿದರೆ ನರಕಯಾತನೆಅನುಭವಿಸುವ ಸನ್ನಿವೇಶದಲ್ಲಿ ಜನರು ಮುಳ್ಳಿನ ಗುಡಿಯ ಮೇಲೆ ಬರಿಗಾಲಲ್ಲಿ ಕುಣಿದು ಕುಪ್ಪಳಿಸುವಈರಗಾರರನ್ನು ಕಂಡು ಒಂದು ಕ್ಷಣ ಭಕ್ತ ಸಮೂಹ ಬೆರಗಾಗುವಂತೆ ಮಾಡುತ್ತದೆ. ಇಂತಹ ಸಾಂಪ್ರದಾಯಿಕ ಬುಡಕಟ್ಟು ಆಚರಣೆಗಳು ಕಾಡುಗೊಲ್ಲ ಸಮುದಾಯ ದಲ್ಲಿ ಮಾತ್ರ ಕಾಣ ಬಹುದಾಗಿದೆ. ಈ ಮುಳ್ಳಿನ ಜಾತ್ರೆಯಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ಬಿಬಿಎಂಪಿ ರಾಜಣ್ಣ, ಜಿಪಂ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಸಿಬಿ ಪಾಪಣ್ಣ, ಎಸಿಪಿ ಬಸವರಾಜ್, ವೇದ ಚಿತ್ರದ ಗಾಯಕ ಮೋಹನ್ ಕುಮಾರ್ ಸೇರಿದಂತೆ ಮತ್ತಿತರರು ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.

Leave a Reply

Your email address will not be published. Required fields are marked *